ಲಾಕ್ ಡೌನ್ ಇದ್ರೂ ಜಾತ್ರೆ : 20 ಮುಖಂಡರು, 200 ಭಕ್ತರ ಮೇಲೆ ಕೇಸ್
ಶುಕ್ರವಾರ, 17 ಏಪ್ರಿಲ್ 2020 (20:03 IST)
ಲಾಕ್‍ಡೌನ್ ಉಲ್ಲಂಘಿಸಿ ಜಾತ್ರೆ ನಡೆಸಿದ್ದರಿಂದಾಗಿ ದೇವಾಲಯ ಆಡಳಿತ ಮಂಡಳಿಯ 20 ಮಂದಿ ಹಾಗೂ 200 ಭಕ್ತರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದಲ್ಲಿ ಶ್ರೀ ಸಿದ್ದಲಿಂಗೇಶ್ವರ ದೇವರ ದೇವಸ್ಥಾನದ ಮಠದ ಜಾತ್ರಾ ಮಹೋತ್ಸವ ಜರುಗಿಸಿದ ಹಿನ್ನೆಲೆಯಲ್ಲಿ ದೇವಸ್ಥಾನದ ಮಠದ 20 ಜನ ಹಾಗೂ 150 ರಿಂದ 200 ಗ್ರಾಮಸ್ಥರ ವಿರುದ್ಧ ವಾಡಿ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ದಾಖಲಿಸಲಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ಕೊರೋನಾ ಹರಡದಂತೆ ಮುಂಜಾಗೃತಾ ಕ್ರಮವಾಗಿ ಜಿಲ್ಲೆಯಾದ್ಯಂತ ಈಗಾಗಲೇ ಸಿ.ಆರ್.ಪಿ.ಸಿ. ಕಾಯ್ದೆ 1973ರ ಕಲಂ 144 ಕಲಂ ಜಾರಿಯಲ್ಲಿದ್ದು, ಯಾವುದೇ ರೀತಿಯ ಜನ ಸಮೂಹ ಹಾಗೂ ಜಾತ್ರೆ ನಡೆಸುವುದನ್ನು ನಿಷೇಧಿಸಲಾಗಿದೆ. ಇಂತಹ ಸಂದರ್ಭದಲ್ಲಿ ಜಾತ್ರೆಯನ್ನು ರದ್ದುಗೊಳಿಸುವುದಾಗಿ ಲಿಖಿತವಾಗಿ ಹೇಳಿಕೆ ನೀಡಿ ತದನಂತರ ಜನಸಮೂಹವನ್ನು ಸೇರಿಸಿ ಜಾತ್ರೆ ಆಯೋಜಿಸಿದ್ದು, ಸರ್ಕಾರದ ಸೂಚನೆಗಳನ್ನು ಉಲ್ಲಂಘಿಸಿದಂತಾಗಿದೆ.
ಇದೇ ಪ್ರಕರಣ ಸಂಬಂಧ ಜಾತ್ರೆಯನ್ನು ತಡೆಯುವಲ್ಲಿ ವಿಫಲರಾಗಿ ಕರ್ತವ್ಯ ಲೋಪವೆಸಗಿದ ಚಿತ್ತಾಪುರ ಗ್ರಾಮೀಣ ಹೋಬಳಿಯ ಸೆಕ್ಟ್ರಲ್ ಮೆಜಿಸ್ಟ್ರೇಟ್ ಆಗಿ ನೇಮಕ ಮಾಡಲಾದ ಚಿತ್ತಾಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಜಕುಮಾರ ರಾಠೋಡ ಹಾಗೂ ವಾಡಿ ಪೊಲೀಸ್ ಠಾಣೆಯ ಪಿ.ಎಸ್.ಐ. ವಿಜಯಕುಮಾರ ಅವರನ್ನು ಅಮಾನತ್ತುಗೊಳಿಸಲಾಗಿದೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದ್ದಾರೆ.