ಬೆಸ್ಕಾಂನಿಂದ 1 ಲಕ್ಷಕ್ಕೂ ಅಧಿಕ ಟ್ರಾನ್ಸ್ ಫಾರ್ಮರ್ ಗಳ ನಿರ್ವಹಣೆ
ಶುಕ್ರವಾರ, 25 ನವೆಂಬರ್ 2022 (17:47 IST)
ದುರಸ್ಥಿ ಸ್ಥಿತಿಯಲ್ಲಿರುವ ಹಾಗು ತಾಂತ್ರಿಕ ದೋಷದಿಂದ ಕೂಡಿರುವ 1,02,713 ವಿದ್ಯುತ್ ಪರಿವರ್ತಕಗಳ (ಟಿಸಿ)ಗಳ ನಿರ್ವಹಣೆಯನ್ನು ಬೆಸ್ಕಾಂ ಕಳೆದ 7 ತಿಂಗಳಲ್ಲಿ ಮಾಡಿದೆ.
ಟಿಸಿ ನಿರ್ವಹಣೆಯನ್ನು ಎಲ್ಲಾ 535 ಸೆಕ್ಷನ್ ಗಳಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಟಿಸಿ ನಿರ್ವಹಣೆ ಅಭಿಯಾನಕ್ಕೆ ಮೇ 5. 2022 ರಂದು ಚಾಲನೆ ನೀಡಲಾಗಿತ್ತು. ನವೆಂಬರ್24, 2022ರ ವೇಳೆಗೆ 102713 ಟಿಸಿಗಳ ನಿರ್ವಹಣೆ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ.
ತಾಂತ್ರಿಕ ಸಮಸ್ಯೆ ಎದುರಿಸುತ್ತಿರುವ ಟಿಸಿಗಳಿಗೆ ಶಾಶ್ವತ ಕಾಯಕಲ್ಪ ಒದಗಿಸಲಾಗುತ್ತಿದ್ದು, ಟಿಸಿಗಳ ನಿರ್ವಹಣೆಯಿಂದಾಗಿ ಅವುಗಳ ಕಾರ್ಯಕ್ಷಮತೆ ಹೆಚ್ಚಾಗುವುದರಿಂದ ಗ್ರಾಹಕರಿಗೆ ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಸಲು ನೆರವಾಗುತ್ತದೆ ಎಂದು ಬೆಸ್ಕಾಂ ಎಂಡಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.
ಬೆಸ್ಕಾಂ ವ್ಯಾಪ್ತಿಯಲ್ಲಿ ಟಿಸಿಗಳ ನಿರ್ವಹಣೆಗೆ ವೇಗ ನೀಡಲು ಇತ್ತೀಚೆಗೆ ನಡೆದ ಪರಿಶೀಲನಾ ಸಭೆಯಲ್ಲಿ ಬೆಸ್ಕಾಂ ಎಂಡಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ನಿರ್ವಹಣೆ ಸಂದರ್ಭದಲ್ಲಿ ಟಿಸಿಯಲ್ಲಿನ ಬುಶ್ ಗಳು ಸಡಿಲಗೊಂಡಿದ್ದರೆ ಗಟ್ಟಿಗೊಳಿಸಲಾಗುವುದು, ಜಂಪ್ ರಿಪೇಲ್ ಗಳ ನಿರ್ವಹಣೆ, ಸಡಿಲಗೊಂಡ ವೈರ್ ಸರಿಪಡಿಸುವಿಕೆ ಮತ್ತು ಟಿಸಿ ಆಯಿಲ್ ನಿರ್ವಹಣೆಯನ್ನು ಮಾಡಲಾಗುತ್ತಿದೆ.
ಬೆಸ್ಕಾಂನ ಬೆಂಗಳೂರು ನಗರ ಜಿಲ್ಲೆಯಲ್ಲಿ 35235 ಟಿಸಿಗಳ ನಿರ್ವಹಣೆ ಮಾಡಲಾಗಿದ್ದು, ದಾವಣೆಗೆರೆ ಜಿಲ್ಲೆಯಲ್ಲಿ 12365, ತುಮಕೂರು ಜಿಲ್ಲೆಯಲ್ಲಿ 16234, ಚಿತ್ರದುರ್ಗ ಜಿಲ್ಲೆಯಲ್ಲಿ 12230 ಟಿಸಿಗಳ ನಿರ್ವಹಣೆ ಮಾಡಲಾಗಿದೆ ಎಂದು ಬೆಸ್ಕಾಂ ಎಂಡಿ ಮಾಹಿತಿ ನೀಡಿದ್ದಾರೆ.
ರಾಮನಗರದಲ್ಲಿ 9873, ಚಿಕ್ಕಬಳ್ಳಾಪುರ 7981, ಕೋಲಾರ 4018 ಹಾಗು ಬೆಂಗಳೂರು ಗ್ರಾಮಾಂತರ 4687 ಗಳ ನಿರ್ವಹಣೆ ಮಾಡಲಾಗಿದೆ. ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ನಿರ್ವಹಿಸಿರುವ 35235 ಟಿಸಿಗಳ ಪೈಕಿ ಪಶ್ಚಿಮ ವೃತ್ತದಲ್ಲಿ 7688, ದಕ್ಷಿಣ ವೃತ್ತದಲ್ಲಿ 10261, ಪೂರ್ವ ವೃತ್ತದಲ್ಲಿ 7015 ಹಾಗು ಉತ್ತರ ವೃತ್ತದಲ್ಲಿ 7519 ಟಿಸಿಗಳ ನಿರ್ವಹಣೆ ಕಾರ್ಯ ಪೂರ್ಣ ಗೊಳಿಸಲಾಗಿದೆ ಎಂದು ಬೆಸ್ಕಾಂ ಎಂಡಿ ತಿಳಿಸಿದ್ದಾರೆ. ಟಿಸಿ ನಿರ್ವಹಣೆ ಅಭಿಯಾನಕ್ಕೆ ಮೇ 5 ರಂದು ಇಂಧನ ಇಲಾಖೆ ಚಾಲನೆ ನೀಡಿತ್ತು. ಟಿಸಿ ಗಳ ನಿರ್ವಹಣೆ ಕಾರ್ಯವನ್ನು ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಆರಂಭಿಸಲಾಗಿದೆ.