ಸಂಪುಟ ಪುನಾರಚನೆಯಲ್ಲಿ ಸಚಿವ ಸ್ಥಾನ ದೊರೆಯದೆ ಅಸಮಾಧಾನಗೊಂಡಿದ್ದ ಶಾಸಕ ಮಾಲೀಕಯ್ಯಾ ಗುತ್ತೇದಾರ್‌ಗೆ ಸಿಎಂ ಕರೆ ಮಾಡಿದಾಗ, ಇನ್ನೇನು ಎಲ್ಲವೂ ಮುಗಿತಲ್ಲ..... ಮತ್ಯಾಕೆ ಫೋನ್ ಮಾಡ್ತೀರಾ ಎಂದು ಹೇಳಿ ಫೋನ್ ಕುಕ್ಕಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಂದು ಬೆಳಿಗ್ಗೆ ಸಿಎಂ ಸಿದ್ದರಾಮಯ್ಯ, ಗುತ್ತೇದಾರ್‌ಗೆ ದೂರವಾಣಿ ಕರೆ ಮಾಡಿದಾಗ ಫೋನ್ ಕರೆ ಕಟ್ ಮಾಡಿದ್ದಾರೆ ಎನ್ನಲಾಗಿದೆ. ನಂತರ ಹಲವು ಬಾರಿ ಫೋನ್ ಕರೆಗಳು ಬಂದಾಗ ಅಸಮಾಧಾನದಿಂದಲೇ ಮಾತನಾಡಿದ ಗುತ್ತೇದಾರ್, ಸಚಿವ ಸಂಪುಟ ಪುನಾರಚನೆಯಾಗಿದೆ. ಮತ್ತ್ಯಾಕೆ ನನಗೆ ಕರೆ ಮಾಡಿ ಹಿಂಸೆ ಕೊಡ್ತೀರಾ ಎಂದು ಕೇಳಿದ್ದಾರೆ ಎನ್ನಲಾಗಿದೆ.
ರಾಜಕೀಯದಲ್ಲಿ ಸಚಿವ ಸ್ಥಾನದಿಂದ ವಂಚಿತರಾಗುವುದು ಸಾಮಾನ್ಯ ವಿಷಯ. ಆದರೆ, ನಿಮ್ಮ ಯೋಗ್ಯತೆಗೆ, ಅರ್ಹತೆಗೆ ತಕ್ಕಂತೆ ಹುದ್ದೆ ನಿಮ್ಮನ್ನು ಅರಸಿ ಬರುತ್ತದೆ. ಬೇಜಾರು ಮಾಡಿಕೊಳ್ಳಬೇಡಿ ಎಂದು ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದ್ದಾಗಿ ಮೂಲಗಳು ತಿಳಿಸಿವೆ.