ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಳಿ ಹಿಂದಿಯಲ್ಲಿ ಮಾತನಾಡಲು ಹೇಳಿದಾಗ ಪತ್ರಕರ್ತನಿಗೇ ಕ್ಲಾಸ್ ತೆಗೆದುಕೊಂಡ ಘಟನೆ ಇಂದು ನಡೆದಿದೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳು ಮಲ್ಲಿಕಾರ್ಜುನ ಖರ್ಗೆಯವರನ್ನು ಮಾತನಾಡಿಸಿದರು. ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಪತ್ರಕರ್ತರೊಬ್ಬರು ಹಿಂದಿಯಲ್ಲಿ ಪ್ರಶ್ನೆ ಕೇಳಿದರು.
ಈ ವೇಳೆ ಮಲ್ಲಿಕಾರ್ಜುನ ಖರ್ಗೆ ಕನ್ನಡದಲ್ಲೇ ಪ್ರತಿಕ್ರಿಯಿಸಲು ಹೊರಟಿದ್ದಾರೆ. ಆಗ ಆ ಪತ್ರಕರ್ತ ಸರ್ ಹಿಂದಿಯಲ್ಲಿ ಹೇಳಿ ಎಂದಿದ್ದಾರೆ. ಇದರಿಂದ ಖರ್ಗೆ ಕೊಂಚ ಸಿಟ್ಟಾದರು. ಅರೇ.. ನೀವು ಕನ್ನಡ ಕಲಿಯಿರಿ. ಏಳು ಭಾಷೆಯ ಪತ್ರಕರ್ತರಿದ್ದೀರಿ. ಎಲ್ಲಾ ಭಾಷೆಯಲ್ಲಿ ಮಾತನಾಡಲು ಆಗುತ್ತಾ? ಕನಿಷ್ಠ ಪಕ್ಷ ಕರ್ನಾಟಕಕ್ಕೆ ಬಂದಾಗಲಾದರೂ ಕನ್ನಡ ಕಲಿಯಿರಿ ಎಂದರು.
ಇನ್ನೂ ಮುಂದುವರಿದು, ನೀವು ತಮಿಳುನಾಡಿಗೆ ಹೋಗಿ ಹೀಗೆ ಹಿಂದಿಯಲ್ಲಿ ಮಾತನಾಡಿ ಎಂದರೆ ಅವರು ಕೇಳುತ್ತಾರಾ ಎಂದು ಕೇಳಿದರು. ಆಗ ಆ ಪತ್ರಕರ್ತ ಅಲ್ಲೂ ಕೇಳುತ್ತೇವೆ ಎಂದಿದ್ದಾರೆ. ಅದಕ್ಕೆ ಖರ್ಗೆ, ಅರೇ.. ಅದು ಹೇಗೆ ಸಾಧ್ಯ? ಎಂದು ಬಳಿಕ ಆಂಗ್ಲ ಭಾಷೆಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.