ಡಿಕೆ ಸುರೇಶ್ ದೇಶ ಒಡೆಯುವ ಮಾತಿಗೆ ಮಲ್ಲಿಕಾರ್ಜುನ ಖರ್ಗೆ ಗರಂ

Krishnaveni K

ಶುಕ್ರವಾರ, 2 ಫೆಬ್ರವರಿ 2024 (12:54 IST)
ಬೆಂಗಳೂರು: ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ದೇಶ ವಿಭಜಿಸುವ ಮಾತನಾಡಿದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನಕ್ಕೆ ಕಾರಣವಾಗಿದೆ.

ಸಂಸತ್ತಿನಲ್ಲಿ ಬಜೆಟ್ ಮಂಡನೆ ಬಳಿಕ ತಮ್ಮ ಅಭಿಪ್ರಾಯ ಹಂಚಿಕೊಳ್ಳುವಾಗ ಡಿಕೆ ಸುರೇಶ್ ದಕ್ಷಿಣ ಭಾರತಕ್ಕೆ ಪ್ರತ್ಯೇಕ ರಾಷ್ಟ್ರ ಕೇಳಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಅವರ ಈ ಹೇಳಿಕೆ ಪಕ್ಷಕ್ಕೆ ಮುಜುಗುರವುಂಟು ಮಾಡಿತ್ತು. ಡಿಕೆ ಸುರೇಶ್ ಹೇಳಿಕೆಯನ್ನು ಬಿಜೆಪಿ ಅಸ್ತ್ರವಾಗಿ ಬಳಿಸಿಕೊಂಡು ಟೀಕೆ ಮಾಡುತ್ತಿದೆ. ಇದರ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿ ದೇಶ ಒಡೆಯುವ ಮಾತು ಬೆಂಬಲಿಸಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ.

ಖರ್ಗೆ ಹೇಳಿದ್ದೇನು?
ರಾಜ್ಯಸಭೆಯಲ್ಲಿ  ಈ ವಿಚಾರ ಪ್ರಸ್ತಾಪಿಸಿರುವ ಖರ್ಗೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಾವು ಒಗ್ಗಟ್ಟಾಗಿದ್ದೇವೆ. ದೇಶ ಒಡೆಯುವ ಮಾತು ಯಾರೇ ಹೇಳಿದರೂ ಸಹಿಸಲ್ಲ. ಯಾವುದೇ ಪಕ್ಷವಾದರೂ ಸಹಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಈ ದೇಶಕ್ಕಾಗಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಪ್ರಾಣ ತ್ಯಾಗ ಮಾಡಿದ್ದಾರೆ. ಸಂಸದ ಡಿಕೆ ಸುರೇಶ್ ಹಾಗೆ ಹೇಳಿಲ್ಲ ಎಂದಿದ್ದಾರೆ. ಅದನ್ನು ಚರ್ಚಿಸಬಾರದು ಎಂದಿದ್ದಾರೆ.

ಸುರೇಶ್ ಹೇಳಿಕೆ ಬಗ್ಗೆ ಪಿಯೂಷ್ ಗೋಯಲ್ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿ ಖರ್ಗೆ ಕ್ಷಮೆ ಯಾಚನೆಗೆ ಒತ್ತಾಯಿಸಿದರು. ಇದಕ್ಕೆ ಖರ್ಗೆ ಈ ರೀತಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಕೂಡಾ ಲೋಕಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿ ಕಾಂಗ್ರೆಸ್ ಸ್ಪಷ್ಟನೆ ನೀಡಬೇಕು ಮತ್ತು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ನಿರ್ಮಲಾ ಸೀತಾರಾಮನ್ ತಿರುಗೇಟು
ಇನ್ನು ತಮ್ಮ ಬಜೆಟ್ ಬಗ್ಗೆ ಟೀಕೆ ಮಾಡುವಾಗ ಪ್ರತ್ಯೇಕ ರಾಷ್ಟ್ರ ಬೇಡಿಕೆ ಪ್ರಸ್ತಾಪಿಸಿದ ಸಂಸದ ಡಿಕೆ ಸುರೇಶ್ ವಿರುದ್ಧ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶದ ಏಕತೆ, ಸಾರ್ವಭೌಮತೆ ಬಗ್ಗೆ ಯಾರೂ ಮಾತನಾಡಬಾರದು. ಸಂಸದ ಡಿಕೆ ಸುರೇಶ್ ಹೇಳಿಕೆಯನ್ನು ಖಂಡಿಸುತ್ತೇನೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ