ಕರಸೇವಕ ಶ್ರೀಕಾಂತ್ ಪೂಜಾರಿ ಬಂಧಿಸಿದ್ದಕ್ಕೆ ಸಿಎಂ ಸಿದ್ದು, ಡಿಸಿಎಂ ಡಿಕೆಶಿಗೆ ಖರ್ಗೆ ಕ್ಲಾಸ್

Krishnaveni K

ಶುಕ್ರವಾರ, 5 ಜನವರಿ 2024 (10:16 IST)
ಬೆಂಗಳೂರು: ರಾಮಮಂದಿರ ಲೋಕಾರ್ಪಣೆ ಸಂದರ್ಭದಲ್ಲೇ ಕರಸೇವಕರಾಗಿದ್ದ ಶ್ರೀಕಾಂತ್ ಪೂಜಾರಿಯನ್ನು ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದ 30 ವರ್ಷ ಹಳೆಯ ಪ್ರಕರಣದಲ್ಲಿ ಬಂಧಿಸಿದ್ದು ರಾಜ್ಯ ಸರ್ಕಾರಕ್ಕೇ ತಿರುಗುಬಾಣವಾಗಿದೆ.

ಶ್ರೀಕಾಂತ್ ಪೂಜಾರಿ ಬಂಧನದಿಂದ ಕೆರಳಿರುವ ಬಿಜೆಪಿ ನಾನೂ ಕರಸೇವಕ, ನನ್ನನ್ನೂ ಬಂಧಿಸಿ ಎಂದು ಅಭಿಯಾನವನ್ನೇ ಆರಂಭಿಸಿದೆ. ಈ ವಿಚಾರವನ್ನೇ ಮುಂದಿಟ್ಟುಕೊಂಡ ರಾಜ್ಯ ಸರ್ಕಾರದ ವಿರುದ್ಧ  ಪ್ರತಿಭಟನೆ ನಡೆಸುತ್ತಿದೆ. ಈ ಪ್ರತಿಭಟನೆ ತೀವ್ರವಾಗುತ್ತಿದ್ದಂತೇ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ ಎನ್ನಲಾಗಿದೆ.

30 ವರ್ಷ ಹಳೆಯ ಕೇಸ್ ನ್ನು ಈಗ ಮರುತನಿಖೆ ಮಾಡುವ ಅಗತ್ಯವೇನಿತ್ತು? ಅದೂ ರಾಮಮಂದಿರ ಲೋಕಾರ್ಪಣೆ ಸಂದರ್ಭದಲ್ಲಿ ಇಂತಹ ಪ್ರಕರಣಗಳನ್ನು ಮೈಮೇಲೆಳೆದುಕೊಂಡರೆ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಲಿದೆ. ಬಿಜೆಪಿಗೆ ನಾವೇ ಅಸ್ತ್ರ ಕೊಟ್ಟಂತಾಗುತ್ತದೆ ಎಂದು ಎಐಸಿಸಿ ಅಧ‍್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂಬ ಸುದ್ದಿಯಿದೆ.

ರಾಜ್ಯದಲ್ಲಿ ಇತ್ತೀಚೆಗೆ ಕಾಂಗ್ರೆಸ್ ನಾಯಕರ ಹಿಂದೂ ವಿರೋಧಿ ಹೇಳಿಕೆಗಳು ಮತ್ತು ಇದೀಗ ಕರಸೇವಕನ ಬಂಧನ ವಿಚಾರದಿಂದ ಕಾಂಗ್ರೆಸ್ ಹಿಂದೂ ವಿರೋಧಿ ಎಂದು ಬಿಂಬಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಹೀಗಾಗಿ ಇಂತಹ ಸೂಕ್ಷ್ಮ ವಿಚಾರವನ್ನು ಜಾಣ್ಮೆಯಿಂದ ನಿಭಾಯಿಬೇಕಿತ್ತು ಎಂದು ಖರ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ