ರಾಯಚೂರು: ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿದ ಅವಮಾನ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇತ್ತೀಚೆಗೆ ಮಂಡ್ಯದಲ್ಲಿ ಹನುಮ ಧ್ವಜ ತೆರವುಗೊಳಿಸಿದ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಹಿಂದೂ ಸಂಘಟನೆಗಳಿಂದ ಮತ್ತು ಬಿಜೆಪಿಯಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದರ ಬಗ್ಗೆ ಭಾರೀ ಪ್ರತಿಭಟನೆಗಳೇ ನಡೆದಿದ್ದವು. ಇದು ಹಲವೆಡೆ ಕೋಮು ಸೌಹಾರ್ದತೆಗೆ ಧಕ್ಕೆ ತಂದಿದ್ದವು.
ಟಿಪ್ಪು ಭಾವಚಿತ್ರಕ್ಕೆ ಚಪ್ಪಲಿ ಹಾರ
ರಾಯಚೂರು ಜಿಲ್ಲೆಯ ಸಿರಿವಾರ ಪಟ್ಟಣದಲ್ಲಿ ಕಿಡಿಗೇಡಿಗಳು ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಪ್ರತೀಕಾರ ತೀರಿಸಿದ್ದರು. ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿರುವುದನ್ನು ನೋಡಿ ಮುಸ್ಲಿಮರು ತೀವ್ರ ಆಕ್ರೋಶ ಹೊರಹಾಕಿದ್ದರು. ಇದರ ವಿರುದ್ಧ ಭಾರೀ ಪ್ರತಿಭಟನೆಯೂ ನಡೆಯಿತು. ಒಟ್ಟಾರೆಯಾಗಿ ಈ ಘಟನೆ ಹಿಂದೂ-ಮುಸ್ಲಿಮರ ನಡುವೆ ಕಾದಾಟಕ್ಕೆ ಕಾರಣವಾಯಿತು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎರಡು ತಂಡಗಳನ್ನು ರಚಿಸಿ ಆರೋಪಿಗೆ ಬಲೆ ಬೀಸಿದ್ದರು. ಇದೀಗ ಪ್ರಕರಣ ಸಂಬಂಧ ಆಕಾಶ್ ಎಂಬ ಯುವಕನನ್ನು ಬಂಧಿಸಿದ್ದಾರೆ. ಸ್ಥಳೀಯ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿ ಬಂಧನ ನಡೆಸಲಾಗಿದೆ. ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಜೋರಾಗಿದೆ ಹಸಿರು ವರ್ಸಸ್ ಕೇಸರಿ ದಂಗಲ್
ಹನುಮ ಧ್ವಜ ತೆರವು ಪ್ರಕರಣದ ನಂತರ ರಾಜ್ಯದಲ್ಲಿ ಹಸಿರು ವರ್ಸಸ್ ಕೇಸರಿ ಕಾದಾಟ ಜೋರಾಗಿದೆ. ಹಿಂದೂ ಧರ್ಮದ ಸಂಕೇತವಾದ ಕೇಸರಿ ಧ್ವಜವನ್ನು ತೆರವುಗೊಳಿಸಿದ ಬೆನ್ನಲ್ಲೇ ಮುಸ್ಲಿಂ ಧರ್ಮದ ಸಂಕೇತವಾದ ಹಸಿರು ಧ್ವಜವನ್ನೂ ಕಿತ್ತು ಹಾಕಬೇಕೆಂದು ಹಲವೆಡೆ ಒತ್ತಾಯ, ಪ್ರತಿಭಟನೆಗಳು ನಡೆಯುತ್ತಿವೆ.