ಜಾಮಿಯಾ ಮಸೀದಿಯಲ್ಲಿ ದೇವಸ್ಥಾನ ಇದ್ದಿದ್ದು ನಿಜ: ಎಚ್.ಡಿ. ಕುಮಾರಸ್ವಾಮಿ
ಶ್ರೀರಾಂಗಪಟ್ಟಣದ ಮಸೀದಿಯಲ್ಲಿ ಮಂದಿರ ಇದ್ದಿದ್ದು ನಿಜ. ಆದರೆ ಸ್ಥಳೀಯರು ಸುಮ್ಮನಿರುವಾಗ ಬೇರೆ ಜಿಲ್ಲೆಯವರು ಇಲ್ಲಿ ಬಂದು ಯಾಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀರಂಗಪಟ್ಟಣದ ಜಾಮೀಯಾ ಮಸೀದಿ ಜಾಗದಲ್ಲಿ ಮಂದಿರ ಇದ್ದದ್ದು ನಿಜ. ಇತಿಹಾಸದಲ್ಲಿ ಓದಿ ಇದರ ಬಗ್ಗೆ ತಿಳಿದುಕೊಂಡಿದ್ದೇನೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣಕ್ಕೆ ಹಲವಡೆಯಿಂದ ಯಾತ್ರೆ ಆರಂಭಿಸಲಾಗಿದೆ. ಹೋರಾಟ, ರೋಷಾವೇಶ, ಯಾತ್ರೆ ಮಾಡಲಾಗುತ್ತಿದೆ. ಆದರೆ ಇದು ಕೂತು ಬಗೆಹರಿಸಿಕೊಳ್ಳಬೇಕಾದ ವಿಚಾರವಾಗಿದೆ ಎಂದು ಸಲಹೆ ನೀಡಿದರು.
ರಾಜ್ಯದ ವಿವಿಧೆಡೆಯಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣಕ್ಕೆ ಹಿಂದೂ ಕಾರ್ಯಕರ್ತರು ಯಾತ್ರೆ ಆರಂಭಿಸಿದ್ದಾರೆ. ಆದರೆ ಸರ್ಕಾರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಕರ್ನಾಟಕದ ಜನತೆ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳಬೇಕು. ಸರ್ವಜನಾಂಗದ ಶಾಂತಿಯ ತೋಟವಾಗಿ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ಅವರು ಹೇಳಿದರು.