ಮಂಗಳೂರು ದರೋಡೆ ಪ್ರಕರಣ: ಪೊಲೀಸರಿಗೆ ಸಿಕ್ತು ಮಹತ್ವದ ಸುಳಿವು, ಏನದು

Krishnaveni K

ಸೋಮವಾರ, 20 ಜನವರಿ 2025 (10:25 IST)
ಮಂಗಳೂರು: ಇಲ್ಲಿನ ಕೋಟೆಕಾರ್ ಸಹಕಾರೀ ಬ್ಯಾಂಕ್ ನಲ್ಲಿ ನಡೆದ ದರೋಡೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ. ಏನದು ಇಲ್ಲಿದೆ ನೋಡಿ ಡೀಟೈಲ್ಸ್.

ಮೊನ್ನೆ ಮಟ ಮಟ ಮಧ್ಯಾಹ್ನ ಕೋಟೆಕಾರ್ ಸಹಕಾರೀ ಬ್ಯಾಂಕ್ ಗೆ ನುಗ್ಗಿದ ಐವರ ಗ್ಯಾಂಗ್ ಐದೇ ನಿಮಿಷದಲ್ಲಿ ಬ್ಯಾಂಕ್ ಸಿಬ್ಬಂದಿಗಳಿಗೆ ಗನ್ ತೋರಿಸಿ ಬೆದರಿಸಿ ಗೋಣಿ ಚೀಲದಲ್ಲಿ ಹಣ, ಚಿನ್ನ ದೋಚಿ ಪರಾರಿಯಾಗಿತ್ತು.

ಸಿಎಂ ಸಿದ್ದರಾಮಯ್ಯ ಮಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲೇ ಈ ದರೋಡೆ ನಡೆದಿತ್ತು. ಸಿಸಿಟಿವಿಗಳಲ್ಲಿ ಕಾರು ಕೇರಳ ಕಡೆಗೆ ಹೋಗಿದ್ದು ಪತ್ತೆಯಾಗಿತ್ತು. ಹೀಗಾಗಿ ಪೊಲೀಸರ ಒಂದು ತಂಡ ಕೇರಳಕ್ಕೂ ತೆರಳಿ ಪರಿಶೋಧನೆ ನಡೆಸಿದೆ. ಆದರೆ ಇದುವರೆಗೆ ಆರೋಪಿಗಳನ್ನು ಬಂಧಿಸಲಾಗಿಲ್ಲ.

ಆದರೆ ವಿಚಾರಣೆ ವೇಳೆ ಪೊಲೀಸರಿಗೆ ಗ್ಯಾಂಗ್ ಬಗ್ಗೆ ಮಹತ್ವದ ಸುಳಿವು ಸಿಕ್ಕದೆ ಎನ್ನಲಾಗಿದೆ. ಹರ್ಯಾಣ ಮೂಲದ ಅಂತರ್ ರಾಜ್ಯ ದರೋಡೆಕೋರರ ಗುಂಪು ಈ ಕೃತ್ಯವೆಸಗಿದೆ ಎಂದು ಹೇಳಲಾಗುತ್ತಿದೆ. ಕಳೆದ ವರ್ಷ ತ್ರಿಶ್ಶೂರ್ ನಲ್ಲಿ ಈ ಗ್ಯಾಂಗ್ ಇದೇ ಮಾದರಿಯಲ್ಲಿ ಎಟಿಎಂ ದರೋಡೆ ಮಾಡಿತ್ತು. ಅದೇ ಗ್ಯಾಂಗ್ ಈ ಕೃತ್ಯವೆಸಗಿರಬಹುದು ಎಂದು ಶಂಕಿಸಲಾಗಿದ್ದು ಪೊಲೀಸರು ಆ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ದರೋಡೆಕೋರರ ಗುಂಪು ಬೋಟ್ ಮೂಲಕ ದುಬೈಗೆ ಪರಾರಿಯಾಗಿರಬಹುದು ಎಂದೂ ಕೇಳಿಬರುತ್ತಿದೆ. ಇನ್ನೊಂದು ಮೂಲದ ಪ್ರಕಾರ ರೈಲು ಮಾರ್ಗವಾಗ ದರೋಡೆಕೋರರ ಗುಂಪು ಮುಂಬೈ ಸೇರಿರಬಹುದು ಎನ್ನಲಾಗುತ್ತಿದೆ. ಸಾಕಷ್ಟು ಚಿನ್ನಾಭರಣ ದೋಚಿರುವ ಕಾರಣ ಪೊಲೀಸರು ಕೇರಳ, ಕರ್ನಾಟಕದ ಚಿನ್ನಾಭರಣ ಅಂಗಡಿಗಳನ್ನೂ ಪರಿಶೋಧನೆ ನಡೆಸಿದ್ದಾರೆ.

ಇನ್ನು ತಲಪ್ಪಾಡಿ ಗೇಟ್ ಮೂಲಕ ಕಾರು ಸಾಗಿದ್ದು ಪತ್ತೆಯಾಗಿತ್ತು. ಆದರೆ ಸಿಸಿಟಿವಿ ದೃಶ್ಯದಲ್ಲಿ ಈ ಕಾರಿನಲ್ಲಿ ಕದ್ದ ಮಾಲು ಕಂಡುಬಂದಿರಲಿಲ್ಲ. ಅಲ್ಲದೆ ಬ್ಯಾಂಕ್ ನಿಂದ ತಲಪ್ಪಾಡಿ ಗೇಟ್ ತಲುಪಲು ಕೇವಲ 5-6 ನಿಮಿಷ ಸಾಕು. ಆದರೆ ದರೋಡೆಕೋರರು ಸುಮಾರು 10 ನಿಮಿಷ ತೆಗೆದುಕೊಂಡಿದ್ದಾರೆ. ಇದೂ ಕೂಡಾ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಇದರ ನಡುವೆ ಆರೋಪಿಗಳು ಕಾರು ಬದಲಾಯಿಸಿ ತಮ್ಮ ಮಾಲನ್ನು ಬೇರೊಂದು ವಾಹನದಲ್ಲಿ ಸಾಗಿಸಿರಬಹುದೇ ಎಂದು ಪೊಲೀಸರು ಶಂಕಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ