ಬೆಂಗಳೂರು: ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿಯವರ ಹೋರಾಟ ಆರ್‌ಎಸ್‌ಎಸ್ ವರ್ಸಸ್ ಆರ್‌ಎಸ್‌ಎಸ್ ಮಧ್ಯೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಎಂದು ಟಾಂಗ್ ನೀಡಿದರು.
ಗಿರೀಶ್ ಮಟ್ಟಣ್ಣವರ್ ಮತ್ತು ಮಹೇಶ್ ಶೆಟ್ಟಿ ತಿಮರೋಡಿ ಎಂಬ ಇಬ್ಬರು ಹೋರಾಟಗಾರರು ಆರ್‌ಎಸ್‌ಎಸ್ ಮತ್ತು ಬಿಜೆಪಿಯೊಂದಿಗೆ ನೇರ ಸಂಬಂಧ ಹೊಂದಿದ್ದಾರೆ ಎಂದು ಮಂಗಳವಾರ ಆರೋಪಿಸಿದರು. ಹೀಗಾಗಿ, ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿಯವರು ಯಾರಾ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದರು.
ಧರ್ಮಸ್ಥಳ ವಿರುದ್ಧ ಮಾತನಾಡುವರಲ್ಲಿ ಒಬ್ಬರಾಗಿರುವ ಗಿರೀಶ್ ಮಟ್ಟಣ್ಣನವರ್ ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿದ್ದು, ಯುವ ಮೋರ್ಚಾದ ಅಧ್ಯಕ್ಷರಾಗಿದ್ದ. 2013ರಲ್ಲಿ ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದವರು. ಇನ್ನು ಮಹೇಶ್ ಶೆಟ್ಟಿ ತಿಮರೋಡಿ, ಸಂಘಪರಿವಾರದ ನಾಯಕರು. ಸದಾ ಸಾವರ್ಕರ್, ಗೋಲ್ವಾಲ್ಕರ್ ಫೋಟೋ ಇಟ್ಟುಕೊಂಡಿರುವವರು, ಕೇಸರಿ ಶಾಲು ಹಾಕಿಕೊಂಡಿರುವವರು. ಇದು ಪಕ್ಕಾ ಆರ್‌ಎಸ್‌ಎಸ್ ವಿರುದ್ಧ ಆರ್‌ಎಸ್‌ಎಸ್ ಹೋರಾಟ ಎಂದು ತಿರುಗೇಟು ನೀಡಿದರು.
ಬಿಜೆಪಿಯವರು ಧರ್ಮಸ್ಥಳ ಚಲೋ, ಚಾಮುಂಡಿ ಚಲೋ ಬಿಟ್ಟು ಕನ್ನಡಿಗರ ಪರ ದೆಹಲಿ ಚಲೋ ಮಾಡಲಿ, ಹೋಗಿ ನ್ಯಾಯ ಕೇಳಲಿ ಎಂದರು. ಅಲ್ಲಿ ರಾಜ್ಯಕ್ಕೆ ಸಿಗಬೇಕಾಗಿರುವ ಅನುದಾನದ ಬಗ್ಗೆ ಕೇಳಲಿ ಎಂದರು.
ಇದು ಆರ್‌ಎಸ್‌ಎಸ್ ವರ್ಸಸ್ ಆರ್‌ಎಸ್‌ಎಸ್ ಹೋರಾಟ. ಈಗ ಅವರು ಸರ್ಕಾರವನ್ನು ಕಳಂಕಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿಗೆ ಯಾವ ಆರ್‌ಎಸ್‌ಎಸ್ ಬಣವನ್ನು ಸಂಪರ್ಕಿಸಬೇಕು ಎಂದು ತಿಳಿದಿಲ್ಲ. ಆರ್‌ಎಸ್‌ಎಸ್‌ನಲ್ಲಿ ಎರಡು ಬಣಗಳಿವೆ. ಅವರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಯಾರ ಕಾಲು ಹಿಡಿಯಬೇಕೆಂದು ತಿಳಿದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ಇದೆಲ್ಲ ಅವರ ನಾಟಕ. ಅವರು ರಾಜಕೀಯ ಲಾಭ ಪಡೆಯಲು ಅವಕಾಶ ಸಿಕ್ಕಲ್ಲೆಲ್ಲ ಅದಕ್ಕಾಗಿ ಧುಮುಕುತ್ತಾರೆ. ವಿಶೇಷ ತನಿಖಾ ತಂಡ ವೈಜ್ಞಾನಿಕವಾಗಿ ಅಗತ್ಯವಿರುವ ಎಲ್ಲವನ್ನೂ ಮಾಡುತ್ತಿದೆ ಎಂದು ಅವರು ಒತ್ತಿ ಹೇಳಿದರು.