ಬೆಂಗಳೂರು: ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರಕಾರದ ಎಸ್‍ಡಿಪಿಐ, ಪಿಎಫ್‍ಐ ಮೇಲಿನ ಪ್ರೀತಿಯು ಸುಹಾಸ್ ಹತ್ಯೆಯಂಥ ದುಷ್ಕøತ್ಯ, ಹಿಂದೂಗಳ ಬೆದರಿಕೆ- ಹಿಂದೂಗಳ ಹತ್ಯೆಗೆ ಶಕ್ತಿ ಕೊಟ್ಟಂತಿದೆ. ದುಷ್ಟರಿಗೆ ಆನೆ ಬಲ ಬಂದಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.
ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ನಿನ್ನೆ ರಾತ್ರಿ ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಅವರ ಬರ್ಬರ ಹತ್ಯೆ ನಡೆದಿದೆ. ಇದು ಪೂರ್ವನಿಯೋಜಿತ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ವಿವರಿಸಿದರು.
ಕಾಶ್ಮೀರದಲ್ಲಿ ಹಿಂದೂಗಳ ಮಾರಣಹೋಮ ಆಗಿದೆ. ಇದನ್ನು ದೇಶ- ರಾಜ್ಯದ ಜನರು ಮರೆತಿಲ್ಲ; ಇದರ ನಡುವೆ ಹಿಂದೂ ಕಾರ್ಯಕರ್ತನ ಬರ್ಬರ ಹತ್ಯೆ ನಡೆದಿರುವುದು ಖಂಡನೀಯ ಎಂದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದ್ರೋಹಿಗಳು, ಕೊಲೆಗಡುಕರಿಗೆ ಏನು ಮಾಡಿದರೂ ನಡೆಯುತ್ತದೆ ಎಂಬ ಆತ್ಮವಿಶ್ವಾಸ ಹೆಚ್ಚಾಗಿದೆ. ಇದರ ಪರಿಣಾಮವಾಗಿ ಪದೇಪದೇ ಇಂಥ ಕೃತ್ಯ ನಡೆಯುತ್ತಿದೆ. ಹಿಂದೂ ಕಾರ್ಯಕರ್ತರ ಹತ್ಯೆ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಹಿಂದೂ ಸಂಘಟನೆಗಳನ್ನು ಬೆದರಿಸುವ ಕೆಲಸ ನಡೆದಿದೆ. ಕರ್ನಾಟಕದಲ್ಲಿ ಹಿಂದೂ ಮುಖಂಡರ ಕಗ್ಗೊಲೆ ನಿರಂತರವಾಗಿ ನಡೆಯುತ್ತಿದೆ ಎಂದ ಅವರು, ಕರ್ನಾಟಕ ರಾಜ್ಯದಲ್ಲಿ ಗೃಹ ಸಚಿವರು ಬದುಕಿಲ್ಲವೇ? ಗುಪ್ತಚರ ಇಲಾಖೆ ಸತ್ತು ಹೋಗಿದೆಯೇ? ರಾಜ್ಯದ ಕಾನೂನು- ಸುವ್ಯವಸ್ಥೆ ಏನಾಗಿದೆ? ಎಂದು ಕೇಳಿದರು.
ಒಬ್ಬ ಹಿಂದೂ ಕಾರ್ಯಕರ್ತನ ಜೀವಕ್ಕೆ ಬೆದರಿಕೆ ಇದೆ ಎಂದು ಗೊತ್ತಿದ್ದರೂ ಯಾಕೆ ಇಂಥ ಘಟನೆ ಆಗಲು ಸಾಧ್ಯವಾಯಿತು? ಎಂದ ಅವರು, ಮುಖ್ಯಮಂತ್ರಿಗಳ ಮೃದು ಧೋರಣೆಯು ಸುಹಾಸ್ ಕೊಲೆಗೂ ಕಾರಣ ಎಂದು ಟೀಕಿಸಿದರು. ಬಿಜೆಪಿ ಇದನ್ನು ಬಲವಾಗಿ ಖಂಡಿಸುತ್ತದೆ. ಕಗ್ಗೊಲೆ ಖಂಡಿಸಿ ರಾಜ್ಯವ್ಯಾಪಿ ಪ್ರತಿಭಟನೆಗೆ ಕರೆ ಕೊಡಲಿದ್ದೇವೆ ಎಂದು ಹೇಳಿದರು.
ಮಂಗಳೂರಿಗೆ ತೆರಳಿ ಸುಹಾಸ್ ಅವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸುವೆ. ಪಕ್ಷದ ಮುಖಂಡರು ಅಲ್ಲಿಗೆ ಬರಲಿದ್ದಾರೆ ಎಂದು ತಿಳಿಸಿದರು. ಹಿಂದೂವಿರೋಧಿ ರಾಜ್ಯ ಸರಕಾರ ತೊಲಗುವ ವರೆಗೆ ರಾಜ್ಯದ ಜನರಿಗೆ ನೆಮ್ಮದಿ ಇರಲಾರದು ಎಂದು ಅವರು ಪ್ರಶ್ನೆಗೆ ಉತ್ತರಿಸಿದರು.
ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಕೆಲ ತಿಂಗಳುಗಳಿಂದ ಮುಖ್ಯಮಂತ್ರಿಗಳ ಹೇಳಿಕೆಯು ದೇಶದ್ರೋಹಿಗಳಿಗೆ ಶಕ್ತಿ ಕೊಡುವಂತಿದೆ. ಗೃಹಸಚಿವರ ನಿಷ್ಕ್ರಿಯತೆಯಿಂದ ಕರ್ನಾಟಕದಲ್ಲಿ ಇದ್ದೇವಾ ಅಥವಾ ಪಾಕಿಸ್ತಾನದಲ್ಲಿ ಇದ್ದೇವಾ ಎಂಬ ಚರ್ಚೆಗೆ ಕಾರಣವಾಗಿದೆ. ರಾಜ್ಯ ಸರಕಾರದ ಹಿಂದೂ ವಿರೋಧಿ ನಡವಳಿಕೆಗಳು, ಹಿಂದೂ ವಿರೋಧಿ ನೀತಿಯಿಂದ ಇಂಥ ದೇಶದ್ರೋಹಿಗಳಿಗೆ ಶಕ್ತಿ ತುಂಬುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿಗೆ ಹೆದರಿಕೊಂಡು ಜಾತಿ ಗಣತಿ ನಡೆಸಲು ತೀರ್ಮಾನಿಸಿದ್ದಾರೆ ಎಂಬ ಕಾಂಗ್ರೆಸ್ಸಿಗರಿಗೆ ನಾಚಿಕೆ ಆಗಬೇಕು. ಇವರಿಗೆ ಕಳಕಳಿ ಇದ್ದರೆ, ಸ್ವಾತಂತ್ರ್ಯ ಬಂದು 55- 60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷದ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಮನಮೋಹನ್ ಸಿಂಗ್ ಅವರಿಂದ ಜಾತಿ ಗಣತಿ ನಡೆಸಲು ಯಾಕೆ ಸಾಧ್ಯವಾಗಿಲ್ಲ ಎಂದು ಕೇಳಿದರು. ಸಿದ್ದರಾಮಯ್ಯನವರು ಸಮಾಜ- ಸಮಾಜದ ನಡುವೆ ಕಂದಕ ಸೃಷ್ಟಿಸುವುದರಲ್ಲಿ ನಿಸ್ಸೀಮರಿದ್ದಾರೆ ಎಂದು ಟೀಕಿಸಿದರು. ಜಾತಿ- ಜಾತಿಗಳ ನಡುವೆ ವಿಷಬೀಜ ಬಿತ್ತುವುದರಲ್ಲಿ ನಿಸ್ಸೀಮರಿದ್ದಾರೆ ಎಂದು ಆರೋಪಿಸಿದರು.