ಸಚಿವ ಪ್ರಿಯಾಂಕ್ ಖರ್ಗೆಯನ್ನು ಬಿಜೆಪಿ ಟಾರ್ಗೆಟ್ ಮಾಡಿರುವುದು ಇದೇ ಕಾರಣಕ್ಕೆ: ಮಂಜುನಾಥ್ ಭಂಡಾರಿ

Krishnaveni K

ಗುರುವಾರ, 2 ಜನವರಿ 2025 (17:56 IST)
ಬೆಂಗಳೂರು: ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಒತ್ತಾಯಿಸುತ್ತಿರುವ ಪ್ರತಿಪಕ್ಷ ಬಿಜೆಪಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ತಿರುಗೇಟು ನೀಡಿದ್ದು, ಇದೇ ಕಾರಣಕ್ಕೆ ಪ್ರಿಯಾಂಕ್ ಮೇಲೆ ಗೂಬೆ ಕೂರಿಸುತ್ತಿದೆ ಎಂದಿದ್ದಾರೆ.

ಬಿಜೆಪಿ ಸರ್ಕಾರದ ಹಗರಣಗಳನ್ನು ಬಯಲಿಗೆಳೆಯುವ ಮೂಲಕ ಅವರಿಗೆ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಮಣಿಸುವ ಸಲುವಾಗಿ ಬಿಜೆಪಿ ಅವರ ಮೇಲೆ ಸಲ್ಲದ ಆರೋಪ ಹೊರಿಸುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಆರೋಪಿಸಿದ್ದಾರೆ. 
 
ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿಗರಿಗೆ ಭಾರಿ ಥ್ರೆಟ್‌ ಆಗಿ ಪರಿಣಮಿಸಿದ್ದಾರೆ. ಏಕೆಂದರೆ ಬಿಜೆಪಿಗರ ಎಲ್ಲ ಭ್ರಷ್ಟಾಚಾರ, ಅನಾಚಾರಗಳನ್ನು ಅವರು ಬಯಲಿಗೆಳೆದಿದ್ದಾರೆ. ಮಾತ್ರವಲ್ಲ ಭ್ರಷ್ಟಾಚಾರ ಪ್ರಕರಣಗಳನ್ನು ತಾರ್ಕಿಕ ಅಂತ್ಯ ಕಾಣಿಸಲು ಪ್ರಿಯಾಂಕ್ ಖರ್ಗೆ ಅವರು ಹೋರಾಟ ಮಾಡಿದ್ದಾರೆ. ಪಿಎಸ್ಐ ಹಗರಣ, 40 % ಕಮೀಷನ್‌, ಬಿಟ್ ಕಾಯಿನ್ ಹಗರಣ, ಕೋವಿಡ್ ಹಗರಣ ಹೀಗೆ ಎಲ್ಲವನ್ನೂ ಬಯಲಿಗೆಳೆದು, ಅವುಗಳನ್ನು ತನಿಖೆಯಾಗುವಂತೆ ಮಾಡಿದರು. ಮಾತ್ರವಲ್ಲಶಿಕ್ಷೆಯಾಗುವುದಕ್ಕೆ ಕಾರಣರಾಗಿದ್ದಾರೆ. ಅವರು ಕೇವಲ ಗಾಳಿಯಲ್ಲಿ ಗುಂಡು ಹಾರಿಸಿಲ್ಲ. ಪ್ರತಿ ಭ್ರಷ್ಟಾಚಾರವನ್ನೂ ಅಂಕಿ ಅಂಶ, ದಾಖಲೆ ಸಹಿತ ಬೀದಿಗೆ ತಂದರು. ಮತ್ತು ಪ್ರಬಲವಾಗಿ ಹೋರಾಟ ಮಾಡಿದವರು. ಹಾಗಾಗಿ ಅನಗತ್ಯವಾಗಿ ಈಗ ಸಚಿನ್‌ ಆತ್ಮಹತ್ಯೆ ಪ್ರಕರಣಗಳನ್ನು ಅವರ ತಲೆಗೆ ಕಟ್ಟುವ ಪ್ರಯತ್ನವನ್ನು ಅನಗತ್ಯವಾಗಿ ಮಾಡಲಾಗುತ್ತಿದೆ ಎಂದು ದೂರಿದ್ದಾರೆ. 
 
ಸಚಿನ್ ಆತ್ಮಹತ್ಯೆ ಮಾಡಿಕೊಂಡಿರುವ ಕಾರಣ ಏನು ಎಂಬುದನ್ನು ತಿಳಿಯಲು ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿದೆ. ಇನ್ನು ಈ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಅವರ ಪಾತ್ರ ಇಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಅಲ್ಲದೆ, ಸಚಿನ್ ಡೆತ್‌ ನೋಟ್‌ನಲ್ಲಿ ಪ್ರಿಯಾಂಕ್ ಅವರ ಹೆಸರೂ ಇಲ್ಲ. ಆದರೂ ಬಿಜೆಪಿಗರು ರಾಜ್ಯಾದ್ಯಂತ ಬೊಬ್ಬೆ ಹೊಡೆಯತ್ತಿದ್ದಾರೆ. ತನಿಖೆ ನಡೆದು, ಅದರ ವರದಿ ಬರಲಿ. ಆಗ ಎಲ್ಲ ಸತ್ಯಾಸತ್ಯತೆಯೂ ಹೊರಗೆ ಬರುತ್ತದೆ. ವರದಿ ಬರುವುದಕ್ಕೆ ಮೊದಲೇ ಇವರು ತೀರ್ಪು ಕೊಡುತ್ತಿದ್ದಾರೆ. ಇವರೇ ತನಿಖೆಯನ್ನೂ ಮಾಡಲು ಹೊರಟಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ? ಬಿಜೆಪಿಗರು ಸುಳ್ಳನ್ನೇ ಸತ್ಯ ಮಾಡಲು ಹೊರಟಿದ್ದಾರೆ. ಇದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಸಂಸ್ಕೃತಿಯಾಗಿದೆ ಎಂದು ಆರೋಪಿಸಿದ್ದಾರೆ.
 
ಬಿಜೆಪಿಯಿಂದ ಹೆಣದ ಮೇಲೆ ರಾಜಕೀಯ 
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಿಂದಲೂ ಬಿಜೆಪಿಯವರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಲೇ ಬರುತ್ತಿದ್ದಾರೆ. ಆದರೆ, ಈವರೆಗೂ ಅವರು ಯಾವುದರಲ್ಲೂ ಯಶ ಕಂಡಿಲ್ಲ. ಆ ಮೂಲಕ ದೇಶದ ಜನರ ಮುಂದೆ ಬೆತ್ತಲಾಗುತ್ತಿದ್ದಾರೆ. ಅದರ ಇನ್ನೊಂದು ಭಾಗವಾಗಿ ಪ್ರಿಯಾಂಕ್ ಖರ್ಗೆ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಖಂಡಿತವಾಗಿಯೂ ಈ ಹೋರಾಟದಲ್ಲಿ ಅವರಿಗೆ ಫಲ ಸಿಗುವುದಿಲ್ಲ. ಇನ್ನು ಸಚಿನ್ ಅವರು ಗುತ್ತಿಗೆದಾರರೇ ಅಲ್ಲ ಎಂಬ ಅನುಮಾನ ಶುರುವಾಗಿದೆ. ಗುತ್ತಿಗೆದಾರರ ಸಂಘದವರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅದೇನೇ ಇದ್ದರೂ ತನಿಖೆಯಿಂದ ಹೊರಗೆ ಬರುತ್ತದೆ. ಆದರೆ, ಬಿಜೆಪಿಯವರು ಹೆಣದ ಮೇಲೆ ರಾಜಕೀಯ ಮಾಡುವವರು ಎಂಬುದು ಪದೇ ಪದೆ ಸಾಬೀತಾಗುತ್ತಲೆ ಇದೆ. ಅವರು ಹೆಣ ಬೀಳುವುದನ್ನೇ ಕಾಯುತ್ತಾ ಇರುತ್ತಾರೆ. ಈ ರೀತಿ ಮಾಡಿ ರಾಜಕೀಯ ಮಾಡಲು ಹೊರಟಿದ್ದಾರೆ.
 
ಕೆ.ಎಸ್. ಈಶ್ವರಪ್ಪ ಅವರ ಪ್ರಕರಣವೇ ಬೇರೆ, ಈಗ ನಡೆದಿರುವ ಸಚಿನ್ ಆತ್ಮಹತ್ಯೆ ಪ್ರಕರಣವೇ ಬೇರೆ. ಆ ಪ್ರಕರಣದಲ್ಲಿ ಸಂತ್ರಸ್ತ ವಿಡಿಯೋ ಮಾಡಿ ಈಶ್ವರಪ್ಪ ಅವರ ಹೆಸರನ್ನು ಹೇಳಿದ್ದರು. ಜೊತೆಗೆ ಅವರ ಹೆಸರನ್ನು ಬರೆದಿಟ್ಟಿದ್ದರು. ಆದರೆ, ಸಚಿನ್ ಪ್ರಕರಣದಲ್ಲಿ ಪ್ರಿಯಾಂಕ್ ಹೆಸರನ್ನು ಬರೆದಿಟ್ಟಿಲ್ಲ. ಜೊತೆಗೆ ವಿಡಿಯೋವನ್ನು ಮಾಡಲಾಗಿಲ್ಲ. ಇಷ್ಟಿದ್ದರೂ ವಿನಾಕಾರಣವಾಗಿ ಪ್ರತಿಪಕ್ಷದವರು ಪ್ರಿಯಾಂಕ್ ಖರ್ಗೆ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಇದರಲ್ಲಿ ಎಷ್ಟೇ ಬೊಬ್ಬೆ ಹೊಡೆದರೂ ಖಂಡಿತವಾಗಿಯೂ ಯಾವುದೇ ರೀತಿಯ ಫಲ ಕಾಣುವುದಿಲ್ಲ. 
 
ಷಾ ವಿವಾದ ಮರೆಮಾಚುವ ಯತ್ನ
ಇನ್ನು ಕೇಂದ್ರ ಗೃಹ ಮಂತ್ರಿ ಅಮಿತ್ ಷಾ ಅವರು ಅಂಬೇಡ್ಕರ್ ಕುರಿತು ನೀಡಿದ ಹೇಳಿಕೆಗೆ ದೇಶಾದ್ಯಂತ ಕಿಡಿ ಹೊತ್ತಿಕೊಂಡಿದೆ. ದಲಿತರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇದನ್ನು ಡೈವರ್ಟ್ ಮಾಡಲು, ಮರೆಮಾಚುವ ಸಂಬಂಧ ಈ ಪ್ರಕರಣವನ್ನು ಬಿಜೆಪಿಗರು ಎತ್ತಿಕೊಂಡಿದ್ದಾರೆ. ಅಮಿತ್ ಷಾ ಹೇಳಿಕೆ ಸಂಬಂಧ ವಿಜಯಪುರ, ಯಾದಗಿರಿ, ಚಾಮರಾಜನಗರ ಬಂದ್ ಆಗಿದ್ದಲ್ಲದೆ, ರಾಜ್ಯಾದ್ಯಂತ ಆಕ್ರೋಶ ಮಡುಗಟ್ಟಿದೆ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ದಲಿತ ನಾಯಕರಾಗಿದ್ದರಿಂದ ಇವರ ಮೇಲೆ ಜನರನ್ನು ಎತ್ತಿಕಟ್ಟಲು ಇಂಥ ಪ್ರಯತ್ನ ಮಾಡಲಾಗುತ್ತಿದೆ. ಈ ಎಲ್ಲ ಹುಳುಕುಳನ್ನು ಮುಚ್ಚಿಹಾಕುವುದಕ್ಕೋಸ್ಕರ ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಮುನ್ನೆಲೆಗೆ ತರಲು ಬಿಜೆಪಿ ಹೊರಟಿದ್ದಾರೆಯೇ ಹೊರತು. ಇಡೀ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ. ಮೊದಲು ಅವರಲ್ಲಿರುವ ಭಿನ್ನಮತವನ್ನು ಸರಿಪಡಿಸಿಕೊಳ್ಳಲಿ. ಇನ್ನು ಪ್ರತಿಪಕ್ಷ ನಾಯಕರಾಗಿ ಆರ್.ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಮ್ಮ ಸ್ಥಾನಗಳ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಅಶೋಕ್, ವಿಜಯೇಂದ್ರ, ಯತ್ನಾಳ್ ಸೇರಿದಂತೆ ಅವರವರಲ್ಲೇ ಎ,ಬಿ,ಸಿ ಬಣಗಳು ಆಗಿವೆ. ಆ ವೈಫಲ್ಯಗಳನ್ನು ಮುಚ್ಚಲು ಇಂಥ ಹೋರಾಟ ಮಾಡುತ್ತಿದ್ದಾರೆ ಎಂದು ಮಂಜುನಾಥ ಭಂಡಾರಿ ದೂರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ