ಪತಿಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್ ಏಕಸದಸ್ಯ ಪೀಠವು ಪತಿಯ ವಿರುದ್ಧವೂ ಅತ್ಯಾಚಾರ ಕೇಸ್ ಪರಿಗಣಿಸಬೇಕು. ಪತಿಯ ಕೃತ್ಯದಿಂದ ಪತ್ನಿಯ ಮೇಲೆ ಮಾನಸಿಕವಾಗಿ, ದೈಹಿಕವಾಗಿ ಪರಿಣಾಮ ಬೀರುತ್ತದೆ. ಪತ್ನಿಯ ಮನಸಿನ ಮೇಲೆ ಅಳಿಸಲಾಗದ ಕಲೆ ಉಳಿದುಬಿಡುತ್ತದೆ. ಅತ್ಯಾಚಾರದ ವಿಚಾರದಲ್ಲಿ ಮಹಿಳೆ, ಪತ್ನಿಯ ನಡುವೆ ತಾರತಮ್ಯ ಸರಿಯಲ್ಲ. ವಿವಾಹ ಪತ್ನಿಯ ಮೇಲೆ ದೌರ್ಜನ್ಯವೆಸಗಲು ನೀಡುವ ಅನುಮತಿಯಲ್ಲ ಎಂದು ಹೇಳಿದೆ.
"ಸಂವಿಧಾನದ ಅಡಿಯಲ್ಲಿ ಎಲ್ಲ ಮಾನವ ಜೀವಿಗಳೂ ಸಮಾನರೇ, ಅವರು ಗಂಡಾಗಿದ್ದರೂ ಸರಿ, ಹೆಣ್ಣಾಗಿದ್ದರೂ ಸರಿಯೇ ಅಥವಾ ಇನ್ಯಾರೇ ಆಗಿದ್ದರೂ ಸೈ, ಸಂವಿಧಾನದ 14ನೇ ವಿಧಿಯ ಅನುಸಾರ ಸಮಾನತೆ ಸಮಾನತೆಯೇ. ಇದರಲ್ಲಿ ಯಾವುದೇ ರಾಜೀ ಇಲ್ಲ'' ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
"ಇಂತಹ ಬಲವಂತದ ಅತ್ಯಾಚಾರ ಪ್ರಕರಣಗಳಲ್ಲಿ ಪತಿಗಿರುವ ವಿನಾಯ್ತಿ ರದ್ದು ಮಾಡುವುದೇ ಸೂಕ್ತ. ಶಾಸಕಾಂಗ ಈ ಬಗ್ಗೆ ಚಿಂತನೆ ನಡೆಸಬೇಕು'' ಎಂದು ಹೇಳಿರುವ ನ್ಯಾಯಪೀಠ ಅಮೆರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಸೇರಿ ಕೆಲ ದೇಶಗಳಲ್ಲಿ ಇದು ಅಪರಾಧ. ಗಂಡನು ಪತ್ನಿಯ ಇಚ್ಚೆಗೆ ವಿರುದ್ಧವಾಗಿ ಸಂಭೋಗಿಸಿದರೆ ಅದು ಅತ್ಯಾಚಾರವೇ. ಇಂಗ್ಲೆಂಡ್ ನಲ್ಲೂ ಪತಿಗಿರುವ ವಿನಾಯಿತಿ ತೆಗೆಯಲಾಗಿದೆ ಎಂದು ಹಲವು ದೇಶಗಳಲ್ಲಿನ ಸ್ಥಿತಿಯನ್ನು ವಿವರಿಸಿದೆ.