ರಾಜಸ್ಥಾನದಲ್ಲಿ 26ವರ್ಷದ ದಲಿತ ಮಹಿಳೆಯನ್ನು ಆಕೆಯ ಮಕ್ಕಳ ಎದುರೇ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ. ಧೋಲ್ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಮಹಿಳೆಗೆ ಬಂದೂಕಿನ ಗುರಿಯಿಟ್ಟು ಹೆದರಿಸಿ ಅತ್ಯಾಚಾರ ಮಾಡಿದ್ದಾರೆ. ಈ ಬಗ್ಗೆ ಮಹಿಳೆ ಕಾಂಚನ್ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮಂಗಳವಾರ ಸಂಜೆ 6ಗಂಟೆಯ ಹೊತ್ತಿಗೆ ನಾನು ಹೊಲದಿಂದ ನನ್ನ ಪತಿ ಮತ್ತು ಮಕ್ಕಳೊಂದಿಗೆ ವಾಪಸ್ ಹೊರಟಿದ್ದೆ. ಈ ವೇಳೆ ಆರು ಮಂದಿ ನಮ್ಮನ್ನು ತಡೆದರು. ಮೊದಲು ನನ್ನ ಪತಿಗೆ ಹೊಡೆದರು. ಪಿಸ್ತೂಲ್ನಿಂದಲೂ ಏಟು ಕೊಟ್ಟರು. ಆತ ತನ್ನ ಜೀವರಕ್ಷಣೆಗಾಗಿ ಓಡಿ ಹೋದ. ನಂತರ ನನಗೂ ಪಿಸ್ತೂಲ್ ತೋರಿಸಿ ಕೊಲೆ ಮಾಡುವುದಾಗಿ ಹೆದರಿಸಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಇವರೆಲ್ಲ ನಮ್ಮ ಹಳ್ಳಿಯ ಅಕ್ಕಪಕ್ಕದವರೇ ಆಗಿದ್ದಾರೆ ಎಂದೂ ಹೇಳಿದ್ದಾರೆ.
ಲಾಲು, ಧನ್ ಸಿಂಗ್, ವಿಪಿನ್ ಮೋಹಿತ್, ಸಚಿನ್ ಮತ್ತು ಲೋಕೇಂದ್ರ ಸಿಂಗ್ ಠಾಕೂರ್ ಎಂಬುವರು ಸೇರಿ ತನ್ನ ಪತಿ ಮತ್ತು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಅದರಲ್ಲಿ ಲಾಲು ಮತ್ತು ಧನ್ಸಿಂಗ್ ನನ್ನ ಮೇಲೆ ರೇಪ್ ಮಾಡಿದ್ದಾರೆ. ಈ ವೇಳೆ ನನ್ನ ತಲೆಗೆ ಬಂದೂಕು ಹಿಡಿಯಲಾಗಿತ್ತು. ಅಲ್ಲೇ ನನ್ನ ಮಕ್ಕಳೂ ಇದ್ದರು ಎಂದು ದೂರಿನಲ್ಲಿ ಸಂತ್ರಸ್ತೆ ವಿವರಿಸಿದ್ದಾರೆ. ಪ್ರಕರಣದ ಬಗ್ಗೆ ಧೋಲ್ಪುರ ವೃತ್ತ ನಿರೀಕ್ಷಕ ಅಧಿಕಾರಿ ವಿಜಯ್ ಕುಮಾರ್ ಸಿಂಗ್ ಪ್ರತಿಕ್ರಿಯೆ ನೀಡಿದ್ದು, ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಅದರ ವರದಿ ಬರಬೇಕು. ನಂತರ ವಿಚಾರಣೆ ನಡೆಸಲಾಗುವುದು ಎಂದು ಹೇಳಿದ್ದಾರೆ.ಸದ್ಯ ಮಹಿಳೆ ಆರೋಪ ಮಾಡಿದವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಇದು ಭೂಮಿ ವಿವಾದದ ಹಿನ್ನೆಲೆಯಲ್ಲಿ ನಡೆದ ಕೃತ್ಯ ಎಂಬ ಬಲವಾದ ಅನುಮಾನವಿದೆ. ಈ ಮಹಿಳೆಯ ಪತಿ ಮತ್ತು ಆರೋಪಿಗಳ ಮಧ್ಯೆ ಜಮೀನು ವಿಚಾರಕ್ಕೆ ಗಲಾಟೆ ನಡೆದಿತ್ತು. ಅದೇ ಸಿಟ್ಟಿನಲ್ಲಿ ಆರೋಪಿಗಳು ಮಹಿಳೆಯನ್ನು ಟಾರ್ಗೆಟ್ ಮಾಡಿದ್ದಾರೆ. ಆದರೆ ಈ ಬಗ್ಗೆ ಇನ್ನಷ್ಟು ವಿಸ್ತೃತ ತನಿಖೆಯಾದ ವಿನಃ ಸ್ಪಷ್ಟವಾಗಿ ಹೇಳಲಾಗದು ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ