ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಬುಧವಾರ ಸಂಜೆ ವೇಳೆ ನಂತರ ನಡೆದ ಅಹಿತಕರ ಘಟನೆ ಸಂಬಂಧ ಒಟ್ಟು ನಾಲ್ಕು ಹಾಗೂ ಬೆಳ್ತಂಗಡಿ ಠಾಣೆಯ ವ್ಯಾಪ್ತಿಯ ಉಜಿರೆಯಲ್ಲಿ ನಡೆದ ಅಹಿತಕರ ಘಟನೆ ಸಂಬಂಧ ಒಟ್ಟು ಮೂರು ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಇದುವರೆಗೆ ಒಟ್ಟು 7 ಪ್ರಕರಣಗಳು ದಾಖಲಾಗಿದೆ.
ತನ್ನ ಮೇಲಿನ ಹಲ್ಲೆ ಸಂಬಂಧ ಕುಡ್ಲ ರಾಂಪೇಜ್' ಯುಟ್ಯೂಬ್ ಚಾನೆಲ್ ನ ಮಾಲೀಕ ಅಜಯ್ ಅಂಚನ್ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾರೆ.
ದೂರಿನಲ್ಲಿ ಒಬ್ಬರ ಹೇಳಿಕೆಯನ್ನು ಚಿತ್ರೀಕರಿಸುತ್ತಿದ್ದ ವೇಳೆ ಸ್ಥಳಕ್ಕೆ ಸುಮಾರು 15 ರಿಂದ 50 ಜನರ ಕಿಡಿಗೇಡಿಗಳ ಗುಂಪು ಬಂದಿತ್ತು. ನನಗೆ ಹಾಗೂ ನನ್ನ ಕ್ಯಾಮೆರಾಮ್ಯಾನ್ ಸುಹಾಸ್, ಸಂಚಾರಿ ಸ್ಟುಡಿಯೊ ಯೂಟ್ಯೂಬ್ ಚಾನೆಲ್‌ನ ಸಂತೋಷ್ ಹಾಗೂ ಯುನೈಟೆಡ್ ಮೀಡಿಯಾ ಯೂಟ್ಯೂಬ್ ಚಾನೆಲ್‌ನ ಅಭಿಷೇಕ್ ಎಂಬವರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದೆ. ನನ್ನ ವಿಡಿಯೊ ಕ್ಯಾಮೆರಾವನ್ನು ರಸ್ತೆಗೆಸೆದು ಹಾನಿಗೊಳಿಸಿದೆ. ಕ್ಯಾಮೆರಾದಲ್ಲಿದ್ದ ಮೆಮೊರಿ ಕಾರ್ಡ್ ಅನ್ನು ಕಿತ್ತುಕೊಂಡಿದೆ ಎಂದು ದೂರಿದ್ದಾರೆ.
ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಪಾಂಗಳ ರಸ್ತೆ ಬಳಿ ಎರಡು ಗುಂಪಿನವರು ಸೇರಿದ್ದರಿಂದ ಮಾಹಿತಿ ಪಡೆದು ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸ್ಥಳಕ್ಕೆ ಧಾವಿಸಿದ್ದರು. ಸ್ಥಳದಿಂದ ತೆರಳುವಂತೆ ಕೇಳಿಕೊಂಡು, ಅಲ್ಲದ್ದವರೂ ಸೂಚನೆ ಪಾಲಿಸದೆ ಪರಪ್ಪರ ಗಲಾಟೆ ನಡೆಸಿದ್ದಾರೆ. ಈ ಸಂಬಂಧ ಧರ್ಮಸ್ಥಳ ಠಾಣೆಯ ಪೊಲೀಸರು ಬಿಎನ್ಎಸ್ ಸೆಕ್ಷನ್ 189(2), 191(2), 132, 324(6) ಮತ್ತು 190 ಬಿ ಅಡಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನೂ ಅನುಮತಿಯಿಲ್ಲದೆ 100 ಮಂದಿ ಧರ್ಮಸ್ಥಳ ಠಾಣಾ ಆವರಣ ಮುಂದೆ ಯಾವುದೇ ಪೂರ್ವಾನುಮತಿಯಿಲ್ಲದೇ, ಕಾನೂನು ಬಾಹಿರವಾಗಿ ಅಕ್ರಮ ಕೂಟ ರಚಿಸಿಕೊಂಡು ಪ್ರತಿಭಟನೆ ನಡೆಸಿದ್ದಾರೆ. ಅವರ ವಿರುದ್ದ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಸೆಕ್ಷನ್ 189 (2) ಮತ್ತು 190 ಅಡಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.