ನೀರಾವರಿ ವಿವಾದ ಸಂಬಂಧ ಕಾನೂನು ತಂಡದೊಂದಿಗೆ ದೆಹಲಿಯಲ್ಲಿ ಸಭೆ: ಬೊಮ್ಮಾಯಿ
ಮಂಗಳವಾರ, 24 ಆಗಸ್ಟ್ 2021 (11:33 IST)
ಬೆಂಗಳೂರು: ಅಂತಾರಾಜ್ಯ ನೀರಾವರಿ ವಿವಾದ ಸಂಬಂಧ ಕಾನೂನು ತಂಡದೊಂದಿಗೆ ದೆಹಲಿಯಲ್ಲಿ ಸಭೆ ನಡೆಸುತ್ತೇವೆ. ಕರ್ನಾಟಕವನ್ನು ಪ್ರತಿನಿಧಿಸುವ ವಕೀಲರು ಸಹ ಆ ಸಭೆಯಲ್ಲಿ ಭಾಗಿಯಾಗುತ್ತಾರೆ. ಜಲ ವಿವಾದ ಬಗ್ಗೆ ಕಾನೂನು ತಜ್ಞರು ಮತ್ತು ವಕೀಲರ ಸಭೆ ನಡೆಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ನಾಲ್ಕೈದು ಸಚಿವರಗಳ ಬಳಿ ಸಮಯ ಕೇಳಿದ್ದೇನೆ. ಆರೋಗ್ಯ, ವಿತ್ತ, ರಕ್ಷಣೆ, ಕೃಷಿ ಮಂತ್ರಿಗಳ ಸಮಯ ಕೇಳಲಾಗಿದೆ. ಆ.25 ರ ಸಂಜೆ ದೆಹಲಿಗೆ ತೆರಳಿ 26ನೇ ತಾರೀಖು ಕೇಂದ್ರ ಸಚಿವರ ಭೇಟಿ ಮತ್ತು ಸಭೆಗಳನ್ನು ನಡೆಸುತ್ತೇನೆ ಎಂದರು.
ಟಾಸ್ಕ್ ಫೋರ್ಸ್ ರಚನೆ: ಸಚಿವರ ಟಾಸ್ಕ್ ಫೋರ್ಸ್ ಇನ್ನೂ ಪುನಾರಚನೆ ಮಾಡಿಲ್ಲ. ಇನ್ನಷ್ಟೇ ಟಾಸ್ಕ್ ಫೋರ್ಸ್ ರಚಿಸಬೇಕಿದೆ. ತಾಂತ್ರಿಕ ತಜ್ಞರ ಸಮಿತಿ ಮುಂದುವರೆಯಲಿದೆ. ಆಗಸ್ಟ್ 30 ಕ್ಕೆ ಸಚಿವರು, ಕೋವಿಡ್ ತಜ್ಞರ ಜತೆ ಸಭೆಯಿದೆ ಎಂದರು.
ಸಂಪುಟದಲ್ಲಿ ಬಾಕಿ ಉಳಿದ ನಾಲ್ಕು ಸ್ಥಾನಗಳ ಭರ್ತಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಷ್ಟ್ರೀಯ ಅಧ್ಯಕ್ಷರ ಜತೆಗೆ ಸಾಂದರ್ಭಿಕವಾಗಿ ಉಳಿದ ನಾಲ್ಕು ಸ್ಥಾನಗಳ ಭರ್ತಿ ಬಗ್ಗೆ ಚರ್ಚೆ ಮಾಡುತ್ತೇನೆ. ರಾಷ್ಟ್ರೀಯ ಅಧ್ಯಕ್ಷರ ಅಭಿಪ್ರಾಯ ಪಡೆದು ಮುಂದುವರೆಯುತ್ತೇನೆ ಎಂದರು.
ನೀರಾವರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ಖಂಡಿಸಿ ಜೆಡಿಎಸ್ ಪಾದಯಾತ್ರೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ನೆಲ ಜಲ ವಿಚಾರ ಬಂದಾಗ ರಾಜಕಾರಣ ಮಾಡಬಾರದು. ಹಿಂದೆ ನಾವೆಲ್ಲ ನೆಲ ಜಲ ವಿಚಾರದಲ್ಲಿ ಒಗ್ಗಟ್ಟಾಗಿ ಹೋರಾಡಿದ್ದೇವೆ. ಇದಕ್ಕೆ ಇತಿಹಾಸ ಸಾಕ್ಷಿ ಇದೆ. ಹಿಂದಿನ ಸಂದರ್ಭಗಳಲ್ಲಿ ಏನೇನಾಗಿದೆಯೆಂದು ತಿಳಿಯಲಿ. ಜೆಡಿಎಸ್ ನವರಿಗೆ ಪಾದಯಾತ್ರೆ ಮಾಡಲು ಸ್ವಾತಂತ್ರ್ಯ ಇದೆ. ಆದರೆ ನೆಲ ಜಲ ವಿಚಾರದಲ್ಲಿ ನಾವು ನಮ್ಮ ಹಕ್ಕನ್ನು ಪಡೆದುಕೊಳ್ಳಲು ಎಲ್ಲ ಪ್ರಯತ್ನ ಮಾಡುತ್ತೇವೆ. ಇದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು.