ಏಷನ್ ಅಭಿವೃದ್ಧಿ ಬ್ಯಾಂಕ್ ನಿಂದ ಮೆಟ್ರೊಗೆ 500 ದಶಲಕ್ಷ ಡಾಲರ್ ಸಾಲ!
ಶುಕ್ರವಾರ, 20 ಆಗಸ್ಟ್ 2021 (15:16 IST)
ಬೆಂಗಳೂರು: ಏಷನ್ ಅಭಿವೃದ್ಧಿ ಬ್ಯಾಂಕ್ ನೊಂದಿಗೆ 500 ಮಿಲಿಯನ್ ಡಾಲರ್ ಸಾಲದ ಒಪ್ಪಂದಕ್ಕೆ ಬಿ.ಎಂ.ಆರ್.ಸಿ.ಎಲ್ ( ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ) ಸಂಸ್ಥೆ ಸಹಿ ಹಾಕಿದೆ.
ಮೆಟ್ರೋ ರೈಲು ಯೋಜನೆಯ ಅಡಿಯಲ್ಲಿ 53.19 ಕಿ.ಮೀ ಉದ್ದದ ಹೊರ ವರ್ತುಲ ರಸ್ತೆ ಏರ್ ಪೋರ್ಟ್ ಮಾರ್ಗವನ್ನು ರೂ.14,188 ಕೋಟಿ ರೂ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಭಾರತ ಸರ್ಕಾರ ಜೂನ್ 2021ರಲ್ಲಿ ಅನುಮೋದನ ನೀಡಿತ್ತು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಲದ ರೂಪದಲ್ಲಿ ಈಗಾಗಲೇ ರೂ 3,973 ಕೋಟಿ ರೂ ಬಿಡುಗಡೆ ಮಾಡಿದ್ದಾರೆ. ಹೊಸ ಮಾರ್ಗಗಳ ಭೂಸ್ವಾಧೀನದ ವೆಚ್ಚವಾದ 2,762 ಕೋಟಿ ರೂ ರಾಜ್ಯ ಸರ್ಕಾರ ಭರಿಸುತ್ತಿದೆ ಎಂದು ಸಂಸ್ಥೆ ತಿಳಿಸಿದೆ.
318 ಮಿಲಿಯನ್ ಡಾಲರ್ ( 2317 ಕೋಟಿ ರೂ) ಹಣವನ್ನು ಈಗಾಗಲೇ ಜೈಕಾ ಸಂಸ್ಥೆ ಸಾಲದ ರೂಪದಲ್ಲಿ ಕೊಡಲಿದೆ. ಉಳಿದ 500 ಮಿಲಿಯನ್ ಡಾಲರ್ (3,643 ಕೋಟಿ ರೂಪಾಯಿ) ಗಳನ್ನು ಕೊಡಮಾಡಲು ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಒಪ್ಪಿಕೊಂಡಿದ್ದು ಇಂದು ಪತ್ರಗಳಿಗೆ ಸಹಿ ಮಾಡಲಾಗಿದೆ ಎಂದು ಬಿ.ಎಂ.ಆರ್.ಸಿ.ಎಲ್ ಹೇಳಿದೆ.
ಈ ಒಪ್ಪಂದದೊಂದಿಗೆ ಬೆಂಗಳೂರು ಮೆಟ್ರೋ ರೈಲು ಯೋಜನೆಯ 2ಎ ಮತ್ತು 2ಬಿ ಹಂತಗಳಿಗೆ ಬೇಕಾಗಿರುವ ಆರ್ಥಿಕ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ನಮ್ಮ ಮೆಟ್ರೋ ಸಂಸ್ಥೆ ಪ್ರಕಟಣೆ ತಿಳಿಸಿದೆ.