ಇನ್ನು ಐದು ದಿನ ವಿದ್ಯಾರ್ಥಿಗಳಿಗೆ ಕ್ಷೀರಭಾಗ್ಯ...

ಶನಿವಾರ, 29 ಅಕ್ಟೋಬರ್ 2016 (09:17 IST)
ಹುಬ್ಬಳ್ಳಿ: ಪ್ರಾಥಮಿಕ ಶಾಲಾ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆಯಡಿ ವಾರದಲ್ಲಿ ಐದು ದಿನಗಳ ಕಾಲ ಶೀಘ್ರವೇ ಹಾಲು ವಿತರಣೆ ಮಾಡಲಾಗುವುದು ಎಂದು ಪಶುಸಂಗೋಪನ ಸಚಿವ ಎ.ಮಂಜು ಹೇಳಿದರು.
 

 
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾಥಮಿಕ ಶಾಲಾ ಮಕ್ಕಳ ಆರೋಗ್ಯ ದೃಷ್ಠಿಯಲ್ಲಿಟ್ಟುಕೊಂಡು ಈ ಯೋಜನೆ ಜಾರಿಗೆ ತರಬೇಕು ಎಂಬ ಒತ್ತಾಯ ಎಲ್ಲಡೆಯಿಂದ ಕೇಳಿಬರುತ್ತಿದೆ. ಈ ಹಿನ್ನಲೆಯಲ್ಲಿ ಸರಕಾರ ಶೀಘ್ರವೇ ಕ್ರಮ ಜಾರಿಗೆಗೊಳಿಸಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹ ಇದಕ್ಕೆ ತಾತ್ವಿಕ ಒಪ್ಪಿಗೆ ಸೂಚಿಸಿದ್ದು, ಎಷ್ಟೇ ಹೊರೆಯಾದರು ಐದು ದಿನಗಳ ಕಾಲ ವಿಸ್ತರಣೆ ಮಾಡಲಾಗುವುದು ಎಂದರು.
 
ಹಲವು ತಿಂಗಳುಗಳಿಂದ ಹಾಲು ಉತ್ಪಾದಕರಿಗೆ ಬಾಕಿ ಇರುವ ಪ್ರೋತ್ಸಾಹ ಧನ ವಿತರಣೆ ಮಾಡಲಾಗವುದು. ರೈತರ ಬ್ಯಾಂಕ್ ಅಕೌಂಟ್ಗೆ ನೇರವಾಗಿ ಹಣ ಜಮಾ ಆಗಲು ಕ್ರಮ ತೆಗೆದುಕೊಂಡಿದ್ದು, ಆಧಾರ ಕಾರ್ಡ್ ನೀಡದೇ ಇರುವವರು ಇಲಾಖೆಗೆ ಆಧಾರ ಕಾರ್ಡ್ ನೀಡಿ ಬ್ಯಾಂಕ್ ಪಾಸ್ ಬುಕ್ ಪಡೆಯಬೇಕು. ಈಗ ಸರಕಾರದ ಮುಂದೆ ಹಾಲು ಉತ್ಪಾದಕರಿಗೆ ಯಾವುದೇ ರೀತಿ ಪ್ರೋತ್ಸಾಹ ಧನ ಹೆಚ್ಚಳ ಮಾಡುವ ಪ್ರಸ್ತಾವನೆ ಇಲ್ಲ ಎಂದರು.
 
ಉತ್ತರ ಕರ್ನಾಟಕ ಭಾಗದಲ್ಲಿ ಹಾಲಿನ ಪೌಡರ್ ಉತ್ಪಾದನಾ ಘಟಕ ಸ್ಥಾಪನೆಗೆ ಸರಕಾರ ಮುಂದಾಗಿದ್ದು, ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಉಕ ಭಾಗದ ಸೂಕ್ತ ಸ್ಥಳಗಳಲ್ಲಿ ಈ ಘಟಕ ಸ್ಥಾಪನೆ ಮಾಡಲಾಗುವುದು. ಇದು ಹೈನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುವುದರಿಂದ ರೈತರ ಆತ್ಮಹತ್ಯೆ ತಡೆಗಟ್ಟಲು ಸಹಕಾರಿಯಾಗುತ್ತದೆ ಎಂದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ