ರೈತನಿಗೆ ಅವಮಾನ ಮಾಡಿದ ಜಿಟಿ ಮಾಲ್ ಗೆ ಏಳು ದಿನ ಬೀಗ: ಸದನದಲ್ಲೂ ಕಾವೇರಿದ ಪಂಚೆ ಚರ್ಚೆ

Krishnaveni K

ಗುರುವಾರ, 18 ಜುಲೈ 2024 (11:51 IST)
ಬೆಂಗಳೂರು: ಜಿಟಿ ಮಾಲ್ ನಲ್ಲಿ ಇತ್ತೀಚೆಗೆ ಪಂಚೆ ಉಟ್ಟುಕೊಂಡು ಬಂದ ಕಾರಣಕ್ಕೆ ರೈತನನ್ನು ಒಳಗೆ ಬಿಡದೇ ಅವಮಾನಿಸಿದ ಘಟನೆ ಈಗ ಸದನದಲ್ಲೂ ಪ್ರಸ್ತಾಪವಾಗಿದೆ. ಈ ಬಗ್ಗೆ ಎಲ್ಲಾ ಶಾಸಕರೂ ಪ್ರಸ್ತಾಪ ಮಾಡಿದ್ದು ಮಾಲ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಮಾಹಿತಿ ನೀಡಿದ್ದಾರೆ.

ಮೊನ್ನೆಯಷ್ಟೇ ಹಾವೇರಿ ಜಿಲ್ಲೆಯ ರೈತರೊಬ್ಬರು ಪಂಚೆ ಉಟ್ಟುಕೊಂಡು ತಮ್ಮ ಮಗನ ಜೊತೆ ಸಿನಿಮಾ ನೋಡಲು ಜಿಟಿ ಮಾಲ್ ಗೆ ಬಂದಿದ್ದಾಗ ಅವರ ಡ್ರೆಸ್ ನೋಡಿ ಒಳಗೆ ಬಿಟ್ಟುಕೊಳ್ಳದೇ ಮಾಲ್ ಸಿಬ್ಬಂದಿ ಅವಮಾನಿಸಿದ್ದರು. ಈ ಬಗ್ಗೆ ಅವರ ಪುತ್ರ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡಿದ್ದರು.

ಇದು ಬೆಳಕಿಗೆ ಬರುತ್ತಿದ್ದಂತೇ ಕೆಲವು ಕನ್ನಡ ಸಂಘಟನೆಗಳು ಮಾಲ್ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಅಷ್ಟೇ ಅಲ್ಲ, ರೈತನನ್ನು ಕರೆದುಕೊಂಡು ಮಾಲ್ ಸಿಬ್ಬಂದಿಯಿಂದ ಕ್ಷಮೆ ಕೇಳಿಸಿದ್ದರು. ಬಳಿಕ ಮಾಲ್ ಇನ್ ಚಾರ್ಜ್ ಕ್ಷಮೆ ಕೇಳಿ ಸನ್ಮಾನಿಸಿ ಕಳುಹಿಸಿದ್ದರು. ಈ ಘಟನೆ ಈಗ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದೆ.

ಇಂದು ಸದನದಲ್ಲೂ ಈ ವಿಚಾರ ಚರ್ಚೆಯಾಗಿದೆ. ಈ ಮಾಲ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎಲ್ಲಾ ಶಾಸಕರಿಂದ ಒತ್ತಾಯ ಕೇಳಿಬಂತು. ಈ ಹಿನ್ನಲೆಯಲ್ಲಿ ಸ್ಪಷ್ಟನೆ ನೀಡಿದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಮಾಗಡಿ ರಸ್ತೆಯಲ್ಲಿರುವ ಜಿಟಿ ಮಾಲ್ ನ್ನು 7 ದಿನಗಳ ಕಾಲ ಬಂದ್ ಮಾಡಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಈ ಬಗ್ಗೆ ಬಿಬಿಎಂಪಿ ಕಮಿಷನರ್ ಜೊತೆಗೂ ಮಾತನಾಡಿದ್ದೇನೆ. ಇದಕ್ಕೆ ಕಾನೂನಿನಲ್ಲೂ ಅವಕಾಶವಿದೆ. ಇಂತಹ ವರ್ತನೆಯನ್ನು ಸಹಿಸುವುದಿಲ್ಲ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ