ಬೆಂಗಳೂರು: ಮನೆಕೆಲಸದಾಕೆಯಿಂದ ದೌರ್ಜನ್ಯ ಆರೋಪ ಕೇಳಿಬರುತ್ತಿದ್ದಂತೇ ಜೆಡಿಎಸ್ ನಾಯಕ, ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಜರ್ಮನಿಗೆ ತೆರಳಿದ್ದಾರೆ ಎನ್ನಲಾಗಿದೆ.
ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಮತ್ತು ಅವರ ತಂದೆ ಎಚ್ ಡಿ ರೇವಣ್ಣ ಹೆಸರು ಕೇಳಿಬಂದಿದೆ. ಅವರ ಮನೆಯಲ್ಲಿ ಈ ಹಿಂದೆ ಕೆಲಸ ಮಾಡಿಕೊಂಡಿದ್ದ ಮಹಿಳೆಯೇ ಆರೋಪ ಮಾಡಿದ್ದಾಳೆ. ತಂದೆ-ಮಗ ಇಬ್ಬರೂ ಲೈಂಗಿಕ ದೌರ್ಜನ್ಯವೆಸಗಿರುವುದಾಗಿ ಹೇಳಿದ್ದಳು. ಅವರ ಮನೆಯಲ್ಲಿ ಕೆಲಸ ಮಾಡುವ ಇತರೆ ಮಹಿಳೆಯರೂ ಇದೇ ಕಾರಣಕ್ಕೆ ಅಲ್ಲಿ ಕೆಲಸ ಮಾಡಲು ಭಯ ಪಡುತ್ತಿದ್ದರು ಎಂದಿದ್ದಳು.
ಈ ಘಟನೆ ಬಯಲಿಗೆ ಬರುತ್ತಿದ್ದಂತೇ ಸಿಎಂ ಸಿದ್ದರಾಮಯ್ಯ ಘಟನೆ ಕುರಿತಂತೆ ಎಸ್ ಐಟಿ ತನಿಖೆಗೆ ಆದೇಶ ನೀಡಿದ್ದಾರೆ. ಹಾಸನ ಜಿಲ್ಲೆಯಲ್ಲಿ ಅಶ್ಲೀಲ ವಿಡಿಯೋ ತುಣುಕು ಹರಿದಾಡುತ್ತಿದ್ದು ಮೇಲ್ನೋಟಕ್ಕೆ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವುದು ಕಂಡುಬಂದಿದೆ. ಹೀಗಾಗಿ ಘಟನೆ ಸಮಗ್ರ ತನಿಖೆ ನಡೆಸಲು ಎಸ್ ಐಟಿಗೆ ಆದೇಶಿಸಲಾಗಿದೆ ಎಂದಿದ್ದಾರೆ.
ರಾಜ್ಯ ಸರ್ಕಾರ ಪ್ರಕರಣವನ್ನು ಎಸ್ ಐಟಿಗೆ ಒಪ್ಪಿಸುತ್ತಿದ್ದಂತೇ ಇತ್ತ ಪ್ರಜ್ವಲ್ ರೇವಣ್ಣ ಜರ್ಮನಿ ವಿಮಾನವೇರಿದ್ದಾರೆ. ಶನಿವಾರ ಅಪರಾಹ್ನವೇ ಅವರು ಫ್ರಾಂಕ್ ಫ್ರೂಟ್ ವಿಮಾನವೇರಿದ್ದಾರೆ ಎನ್ನಲಾಗಿದೆ. ಮನೆಯಲ್ಲಿ 6 ಜನ ಹೆಣ್ಣು ಮಕ್ಕಳು ಕೆಲಸ ಮಾಡುತ್ತಿದ್ದರು. ಭವಾನಿ ರೇವಣ್ಣ ಮನೆಯಲ್ಲಿ ಇಲ್ಲದೇ ಇದ್ದಾಗ ರೇವಣ್ಣ ಮತ್ತು ಪುತ್ರ ಪ್ರಜ್ವಲ್ ರೇವಣ್ಣ ನೆಪ ಹೇಳಿಕೊಂಡು ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು ಎಂದು ಮಹಿಳೆ ಆರೋಪಿಸಿದ್ದಳು. ಈ ಪ್ರಕರಣವೀಗ ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿದೆ.