ರುದ್ರೇಶ್ ಹತ್ಯೆ ಹಿಂದೆ ಸಚಿವ ರೋಷನ್ ಬೇಗ್ ಕೈವಾಡ: ಕರಂದ್ಲಾಜೆ

ಶುಕ್ರವಾರ, 4 ನವೆಂಬರ್ 2016 (14:39 IST)
ಬಿಜೆಪಿ ಮುಖಂಡ ರುದ್ರೇಶ್ ಹತ್ಯೆಯ ಹಿಂದೆ ಸಚಿವ ರೋಷನ್ ಬೇಗ್ ಕೈವಾಡವಿದೆ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೇ ನೇರವಾಗಿ ಆರೋಪಿಸಿದ್ದಾರೆ.
 
ಶಿವಾಜಿನಗರದಲ್ಲಿ ವೇಗವಾಗಿ ಬಿಜೆಪಿ ಪಕ್ಷವನ್ನು ಮತ್ತು ಆರೆಸ್ಸೆಸ್ ಸಂಘಟನೆಯನ್ನು ಸಂಘಟಿಸುತ್ತಿರುವದನ್ನು ಸಹಿಸದ ಸಚಿವ ರೋಷನ್ ಬೇಗ್ ಸುಪಾರಿ ಕೊಟ್ಟು ರುದ್ರೇಶ್ ಹತ್ಯೆ ಮಾಡಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
 
ರುದ್ರೇಶ್ ಹತ್ಯೆಯಲ್ಲಿ ಎಸ್‌‍ಡಿಪಿಐ ಮತ್ತು ಪಿಎಫ್‌ಐ ಸಂಘಟನೆಯ ಕೈವಾಡವಿರುವುದು ಕಂಡು ಬಂದ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಎರಡೂ ಸಂಘಟನೆಗಳನ್ನು ನಿಷೇಧಿಸಬೇಕು. ಸಚಿವ ಬೇಗ್ ರಾಜೀನಾಮೆಯನ್ನು ಪಡೆದು ತನಿಖೆಗೊಳಪಡಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದ್ದಾರೆ. 
 
ಎಸ್‌‍ಡಿಪಿಐ ಮತ್ತು ಪಿಎಫ್‌ಐ ಸಂಘಟನೆ ಸದಸ್ಯರೊಂದಿಗೆ ಸಚಿವ ರೋಷನ್ ಬೇಗ್ ಸೇರಿದಂತೆ ಕೆಲ ಉಗ್ರಗಾಮಿ ಸಂಘಟನೆಗಳ ಸಂಪರ್ಕವಿದೆ ಎನ್ನುವುದು ಕಂಡು ಬರುತ್ತಿರುವುದರಿಂದ ನಿಷ್ಪಕ್ಷಪಾತ ತನಿಖೆ ಅಗತ್ಯವಿದೆ ಎಂದಿದ್ದಾರೆ.
 
ತನಿಖೆ ನಡೆಸುತ್ತಿರುವ ಅಧಿಕಾರಿಗಳ ಮೇಲೆ ಸಿಎಂ ಸಿದ್ದರಾಮಯ್ಯ, ಸಚಿವರು, ಶಾಸಕರು ಒತ್ತಡ ಹೇರುತ್ತಿದ್ದಾರೆ. ಆದ್ದರಿಂದ, ಪ್ರಕರಣದ ತನಿಖೆಯನ್ನು ಸಿಬಿಐ ಅಥವಾ ಎನ್‌ಐಎಗೆ ಒಪ್ಪಿಸಬೇಕು ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ