ಕಾರ್ಮಿಕ ಸಚಿವ ಸಂತೋಷ್ ಲಾಡ್ ವಿರುದ್ಧ ಕೋಟ್ಯಾಂತರ ರೂಪಾಯಿ ಗುಳುಂ: ಬಿಜೆಪಿ ಆರೋಪ

Krishnaveni K

ಗುರುವಾರ, 7 ಆಗಸ್ಟ್ 2025 (14:50 IST)
ಬೆಂಗಳೂರು: ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆಯ ನೆಪದಲ್ಲಿ ಕಳೆದ 2 ವರ್ಷಗಳಿಂದ ನೂರಾರು ಕೋಟಿ ಅವ್ಯವಹಾರ ನಡೆಸಿರುವ ಸಚಿವ ಸಂತೋಷ್ ಲಾಡ್ ಅವರು ಕೂಡಲೇ ರಾಜೀನಾಮೆ ನೀಡಬೇಕೆಂದು ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್ ಅವರು ಆಗ್ರಹಿಸಿದ್ದಾರೆ.
 
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ಅವರ ಇಲಾಖೆಯಲ್ಲಿ ಭ್ರಷ್ಟಾಚಾರ ಮಾಡಿ ನೂರಾರು ಕೋಟಿ ಹಣವನ್ನು ಲೂಟಿ ಮಾಡಿರುವ ಸಂಬಂಧ ಪುರಾವೆಗಳ ದಾಖಲೆಗಳನ್ನು ಬಿಡುಗಡೆಗೊಳಿಸದರು. ನಂತರ ಮಾತನಾಡಿದ ಅವರು, ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯಿಂದ ಕಾರ್ಮಿಕರ ಆರೋಗ್ಯ ತಪಾಸಣೆಯ ಹೆಸರಿನಲ್ಲಿ ಸುಳ್ಳು ತಪಾಸಣೆಯ ದಾಖಲೆಗಳನ್ನು ನೀಡಿದ್ದಾರೆ. ತಪಾಸಣೆ ನಡೆಸದೇ ಇಡೀ ರಾಜ್ಯದಿಂದ ಅಂದಾಜು 300 ಕೋಟಿಗಿಂತ ಹೆಚ್ಚು ಹಣವನ್ನು ಪಡೆದು ಸರ್ಕಾರ ಲೂಟಿ ಹೊಡೆದಿದೆ ಎಂದು ಆರೋಪಿಸಿದರು.
 
 1982 ರ ಇಸವಿಯಲ್ಲಿ ಹೆಸರಾಂತ ಸಿನಿಮಾ ‘ಕಾರ್ಮಿಕ ಕಳ್ಳನಲ್ಲ’ ಬಿಡುಗಡೆಯಾಗಿತ್ತು. ಅದರಲ್ಲಿ ಮೇರುನಟರಾದ ವಿಷ್ಣುವರ್ಧನ್ ಮತ್ತು ಶಂಕರ್‍ನಾಗ್ ಅವರು ನಟಿಸಿದ್ದರು.  ಶ್ರಮಜೀವಿ ಕಾರ್ಮಿಕನು ಕಳ್ಳನಾಗಿರುವುದಿಲ್ಲವೆಂಬ ಸಂದೇಶ ಆ ಚಿತ್ರದಲ್ಲಿ ಇತ್ತು. ಆದರೆ, ಇಂದು ನಾವು ಕಾಂಗ್ರೆಸ್ ಸರ್ಕಾರದ ಮೇಲೆ ಆರೋಪ ಹೊರಿಸುತ್ತಿರುವುದು ಏನು ಎಂದರೆ ಕಾರ್ಮಿಕ ಕಳ್ಳನಲ್ಲ್ಲ; ಕಾರ್ಮಿಕ ಸಚಿವ ಕಳ್ಳಾನಾ? ಎಂದು ಅವರು ಪ್ರಶ್ನಿಸಿದರು.
 
ಕಟ್ಟಡ ಕಾರ್ಮಿಕರ ನಿಗಮಕ್ಕೆ ಸಾವಿರಾರು ಕೋಟಿ ಹಣವನ್ನು ಸೆಸ್ ಮೂಲಕ ಸಂಗ್ರಹ ಮಾಡಿ, ಅದನ್ನು ಕಟ್ಟಡ ಕಾರ್ಮಿಕರ ಕಲ್ಯಾಣಕ್ಕೆ ಬಳಕೆ ಮಾಡಲಾಗುತ್ತದೆ. ಈ ಯೋಜನೆಯಲ್ಲಿ ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಯುತ್ತದೆ. ಈ ಪೈಕಿ ಕಾರ್ಮಿಕರಿಗೆ 20 ಆರೋಗ್ಯ ತಪಾಸಣೆ ಮಾಡಲು ಮಂಡಳಿ ನಿರ್ಧರಿಸಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 2 ವರ್ಷ ಅವಧಿಯಲ್ಲಿ ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿರುವ ಮಾಹಿತಿಯಂತೆ 67 ಸಾವಿರ ಕಾರ್ಮಿಕರಿಗೆ ಒಟ್ಟು 19 ಕೋಟಿ 74 ಲಕ್ಷ ರೂಗಳನ್ನು ಖರ್ಚು ಮಾಡಿರುವ ಬಗ್ಗೆ ತಿಳಿಸಿರುತ್ತಾರೆ ಎಂದು ಅವರು ವಿವರಿಸಿದರು.
 
ಹೋಟೆಲ್‍ನ ಪ್ರತ್ಯೇಕ ದರದಂತೆ ಆರೋಗ್ಯ ತಪಾಸಣೆಗೂ ನಿಗದಿ
ಹೋಟೆಲ್‍ನಲ್ಲಿ ಇಡ್ಲಿ, ಸಾಂಬಾರ್ ಮತ್ತು ಚಟ್ನಿಗೆ ಬೇರೆ ಬೇರೆ ದರ ನಿಗದಿ ಮಾಡಿದರೆ ಹೇಗಿರುತ್ತದೋ ಹಾಗೆ ಕಾರ್ಮಿಕರ ಆರೋಗ್ಯ ತಪಾಸಣೆಗೂ ದರ ನಿಗದಿಪಡಿಸಿ ಹಣವನ್ನು ಡ್ರಾ ಮಾಡಿ ಅವ್ಯವಹಾರ ಮಾಡಿದ್ದಾರೆ ಎಂದು ಕೆ.ಎಸ್ ನವೀನ್ ಅವರು ಆರೋಪಿಸಿದರು.
 
ಕೇಂದ್ರ ಸರ್ಕಾರ ಸರ್ಕಾರಿ ನೌಕರರಿಗೆ ನಿಗದಿ ಪಡಿಸಿರುವ ಆರೋಗ್ಯ ತಪಾಸಣೆ ವೆಚ್ಚಕ್ಕಿಂತ ಒಂದುವರೆ ಪಟ್ಟು ಜಾಸ್ತಿ ನಿಗದಿ ಪಡಿಸಿ ತಪಾಸಣೆಯ ಹಣವನ್ನು ಪಾವತಿ ಮಾಡಿದ್ದಾರೆ ಎಂದು ದೂರಿದರು. ಇದೆಲ್ಲದಕ್ಕಿಂತ ಮುಖ್ಯಅಂಶವೇನೆಂದರೆ ರಕ್ತ ತಪಾಸಣೆಯ ಮೊದಲೇ ವೈದ್ಯರ ತಪಾಸಣೆಯನ್ನು ಮುಗಿಸಿರುವ ಬಗ್ಗೆ ವರದಿಯನ್ನು ನೀಡಿದ್ದಾರೆ. ರಕ್ತದ ಲ್ಯಾಬ್‍ನಲ್ಲಿ ಸಿಗುವಂತಹ ರಕ್ತದಲ್ಲಿ ಅಥವಾ ಪ್ರಾಣಿಗಳ ರಕ್ತವನ್ನು ಬಳಕೆ ಮಾಡಿ ಸದರಿ ರಕ್ತದಿಂದ ತಪಾಸಣೆ ವರದಿಯನ್ನು ತಯಾರಿಸಿದ್ದಾರೆ ಎಂದು ಆರೋಪಿಸಿದರು.
 
ಇಲಾಖೆ ನೀಡಿರುವ ಮಾಹಿತಿಯಲ್ಲಿ ನಾವು ಗಮನಿಸಬೇಕಾದ ಅಂಶವೇನೆಂದರೆ, ಚಿತ್ರದುರ್ಗ ಜಿಲ್ಲೆಯ 5 ಕಾರ್ಮಿಕರ ಸಂಘಟನೆಗಳ ಪೈಕಿ ಕಟ್ಟಡ ಕಾರ್ಮಿಕ ಮಂಡಳಿಯಲ್ಲಿ ಅಧಿಕೃತವಾಗಿ ನೋಂದಣಿ ಮಾಡಿರುವ ಕಟ್ಟಡ ಕಾರ್ಮಿಕರ ಸಂಖ್ಯೆ ಕೇವಲ 6 ಸಾವಿರ. ಆದರೆ ಸರ್ಕಾರದ ಲೆಕ್ಕದಲ್ಲಿ  33,500 ಕಟ್ಟಡ ಕಾರ್ಮಿಕರ ವಿವರ ಇರುತ್ತದೆ ಎಂದು ಆರೋಪಿಸಿದರು.
 
ಮಂಡಳಿಯು 15 ದಿನಗಳ ಕ್ಯಾಂಪ್ ಮಾಡಿ 33500 ಜನಕ್ಕೂ ತಪಾಸಣೆ ಮಾಡಿದ್ದು, ಒಬ್ಬ ಕಾರ್ಮಿಕನಿಗೆ 2,940 ರೂ ಮೊತ್ತದಂತೆ ಆರೋಗ್ಯ ತಪಾಸಣೆ ಮಾಡಿದ್ದೇವೆ ಎಂದು ವರದಿ ನೀಡಿದ್ದಾರೆ. ತಪಾಸಣೆ ಮಾಡಿರುವ ಆಸ್ಪತ್ರೆಯ ಮುದ್ರೆ ಮತ್ತು ಸಹಿ ಇರುವುದಿಲ್ಲ. ಮಂಡಳಿ ನಿಗದಿ üಪಡಿಸಿರುವ 20 ಟೆಸ್ಟ್ ಆರೋಗ್ಯ ತಪಾಸಣೆಯಲ್ಲಿ ಸುಮಾರು 16 ಟೆಸ್ಟ್‍ಗಳು ರಕ್ತ ಸಂಬಂಧಿಸಿದಂತೆ ಇದೆ. ಆದರೆ ಒಂದು ಬಾರಿ ಮಾಡುವ ರಕ್ತದ ಟೆಸ್ಟ್ ಅನ್ನು ಒಂದೊಂದು ಟೆಸ್ಟ್‍ಗಳಿಗೆ ಪ್ರತ್ಯೇಕ ಟೆಸ್ಟ್ ದರವನ್ನು ತೋರಿಸುವ ಮೂಲಕ ಅವ್ಯವಹಾರ ಮಾಡಿದ್ದಾರೆ ಎಂದು ದೂರಿದರು.
 
ವಾಸ್ತವದಲ್ಲಿ ಕಾರ್ಮಿಕರಿಗೆ ರಕ್ತ ತಪಾಸಣೆ ವರದಿಯನ್ನು ನೀಡಿಲ್ಲ. ಆದರೆ ಚಿತ್ರದುರ್ಗ ಜಿಲ್ಲೆಗೆ 19 ಕೋಟಿ 74 ಲಕ್ಷ ರೂ ಹಣವನ್ನು ಡ್ರಾ ಮಾಡಿ ಆಸ್ಪತ್ರೆಗಳಿಗೆ ಕೊಡುವ ಕೆಲಸ ಮಾಡಿದ್ದಾರೆ ಎಂದು ದೂರಿದರು. ಕಾರ್ಮಿಕರು ಮತ್ತು ಅವರ ಮಕ್ಕಳಿಗೂ ಇದರ ಲಾಭ ಸಿಗಬೇಕು ಎಂದು ಹೇಳಿ 7, 9, 14 ಮತ್ತು 15 ವರ್ಷದ ಕಾರ್ಮಿಕರ ಮಕ್ಕಳ ಹೆಸರಿಗೂ ತಪಾಸಣೆಯನ್ನು ಮಾಡಿದ್ದಾರೆ. ಆದರೆ 60 ವರ್ಷದ ವ್ಯಕ್ತಿಗೆ ಮಾಡುವ ತಪಾಸಣೆಯನ್ನು 9 ವರ್ಷದ ಮಗುವಿಗೂ ಮಾಡಿದ್ದೇವೆ ಎಂದು ತಪಾಸಣೆಯ ಹಣ ಪಡೆದಿದ್ದಾರೆ ಎಂದು ಅವರು ಆರೋಪಿಸಿದರು.
 
ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ತಪಾಸಣೆ ಮಾಡಿರುವ ಬಗ್ಗೆ ಪರಿಶೀಲಿಸಲು 100 ಕಾರ್ಮಿಕರಿಗೆ ಪ್ರತ್ಯೇಕವಾಗಿ ದೂರವಾಣಿ ಮುಖಾಂತರ ಸಂಪರ್ಕಿಸಿದಾಗ ಅವರು ಯಾವುದೇ ತಪಾಸಣೆ ಆಗಿಲ್ಲ ಎಂದು ತಿಳಿಸಿರುವ ಆಡಿಯೋವನ್ನು ಮಾಧ್ಯಮಗಳಿಗೆ ಕೇಳಿಸಿದರು.
 
ಸಚಿವ ಸಂತೋಷ್ ಲಾಡ್ ಅವರು ಕಳೆದ ಬಾರಿ ಗಿಗ್ ಕಾರ್ಮಿಕರ ಯೋಜನೆಯ ಉದ್ಘಾಟನೆಯ ಸಂಬಂಧ ಚಿತ್ರದುರ್ಗಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಾರ್ಮಿಕರು ಸಚಿವರನ್ನು ಅಡ್ಡಗಟ್ಟಿ ಕಾರ್ಮಿಕ ಇಲಾಖೆಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಪ್ರಶ್ನೆ ಮಾಡಿದ್ದರು. ಆ ಪ್ರಶ್ನೆಗೆ ಅವರು ಉತ್ತರವನ್ನು ನೀಡಿರುವುದಿಲ್ಲ ಎಂದು ಆಕ್ಷೇಪಿಸಿದರು. ಗಿಗ್ ಕಾರ್ಮಿಕರ ಹೆಸರಿನಲ್ಲಿ ಸೆಸ್ ಸಂಗ್ರಹಿಸಿ ನೇರವಾಗಿ ಹಣವನ್ನು ಲೂಟಿ ಹೊಡೆಯಬೇಕು ಎಂದು ಈ ಸರ್ಕಾರ ಚಿಂತನೆ ಮಾಡಿದೆ ಎಂದು ಅವರು ಆರೋಪಿಸಿದರು.
 
ಕಾಂಗ್ರೆಸ್ ಸರ್ಕಾರ ನಿರಂತರವಾಗಿ ಭ್ರಷ್ಟಾಚಾರ ನಡೆಸುತ್ತಿರುವ ಬಗ್ಗೆ ರಾಜ್ಯದ ಜನರಿಗೆ ನಾವು ಈಗಾಗಲೇ ತಿಳಿಸುತ್ತಿದ್ದೇವೆ. ಸರ್ಕಾರದ ವಿರುದ್ಧ ಹೋರಾಟವನ್ನು ಸದನದ ಒಳಗೆ ಮತ್ತು ಹೊರಗಡೆಯೂ ನಾವು ಮಾಡುತ್ತಿದ್ದೇವೆ. ಆದರೆ ಕಟ್ಟಡ ಕಾರ್ಮಿಕರ ಹೆಸರಿನಲ್ಲಿ ಇವರು ಲೂಟಿ ಮಾಡಿದ್ದಾರೆ. ಆದ್ದರಿಂದ ಈ ಅವ್ಯವಹಾರವನ್ನು ಸಿಬಿಐಗೆ ವಹಿಸುವಂತೆ ಅವರು ಆಗ್ರಹಿಸಿದರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ