ಸಾರಿಗೆ ನೌಕರರ ಮುಷ್ಕರ ತಕ್ಷಣ ಪರಿಹರಿಸಿ: ಡಾ.ಸಿ.ಎನ್.ಅಶ್ವತ್ಥನಾರಾಯಣ್

Krishnaveni K

ಮಂಗಳವಾರ, 5 ಆಗಸ್ಟ್ 2025 (15:22 IST)
ಬೆಂಗಳೂರು: ಸರಕಾರಿ ಸಾರಿಗೆ ನೌಕರರ ಮುಷ್ಕರದ ಸಮಸ್ಯೆಯನ್ನು ತಕ್ಷಣ ಪರಿಹರಿಸಬೇಕೆಂದು ಮಾಜಿ ಉಪ ಮುಖ್ಯಮಂತ್ರಿ ಮತ್ತು ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಅವರು ಒತ್ತಾಯಿಸಿದ್ದಾರೆ.
 
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ಸಿನವರು ಮಾತು ಕೊಟ್ಟಂತೆ ನಡೆದಿಲ್ಲ. ಅಧಿಕಾರಕ್ಕೆ ಬಂದ ದಿನವೇ ಸಾರಿಗೆ ನೌಕರರ ಬಗ್ಗೆ ಆಡಿದ್ದನ್ನು ಮರೆತಿದ್ದಾರೆ. ಸಾರಿಗೆ ನೌಕರರ ವಿಚಾರದಲ್ಲಿ ನಾನೂ ಸದನದಲ್ಲಿ ಪ್ರಸ್ತಾಪಿಸಿ ಗಮನ ಸೆಳೆದಿದ್ದೆ. ನೌಕರರ ಸಮಸ್ಯೆ ಪರಿಹರಿಸುವುದಾಗಿ ಸರಕಾರವೂ ತಿಳಿಸಿತ್ತು ಎಂದು ಅವರು ನುಡಿದರು.

ನೌಕರರ ಹಿಂಬಾಕಿಯನ್ನೂ ಕೊಡುತ್ತಿಲ್ಲ; ನಿವೃತ್ತರಿಗೂ ಗ್ರಾಚ್ಯುಟಿ ಮತ್ತಿತರ ಸೌಲಭ್ಯ ಕೊಟ್ಟಿಲ್ಲ. ಬಾಕಿ ಹಣ ಕೊಡುವಲ್ಲಿ ಸರಕಾರ ವಿಫಲವಾಗಿದೆ. ಶಕ್ತಿ ಯೋಜನೆ ಅನುಷ್ಠಾನವಾಗಿದೆ. ಬಸ್‍ಗಳು ತುಂಬಿ ತುಳುಕುತ್ತಿವೆ. ಟಿಕೆಟ್ ಹಣವನ್ನು ಪಾವತಿ ಮಾಡಿಲ್ಲವೇ ಎಂದು ಕೇಳಿದರು.

ಇದು ಕಿವುಡ, ಕುರುಡ, ಮೂಕರ ಸರಕಾರ ಎಂದು ಟೀಕಿಸಿದ ಅವರು, ಖಜಾನೆ ತುಂಬಿ ತುಳುಕುತ್ತಿದೆ ಎನ್ನುತ್ತಾರೆ. ಹಾಗಿದ್ದರೆ ಸಮಸ್ಯೆ ಪರಿಹಾರ ಮಾಡಿಲ್ಲವೇಕೆ? ಎಂದರು. ತಲಾದಾಯದಲ್ಲೂ ನಂಬರ್ 1 ಆಗಿದ್ದೇವೆ. ಆದರೂ, ಯಾಕೆ ನ್ಯಾಯ ಕೊಡಲು ಆಗುತ್ತಿಲ್ಲ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಬಿಜೆಪಿ ಈ ನೌಕರರ ಪರವಾಗಿ ಧ್ವನಿಯಾಗಿ ನಿಲ್ಲಲಿದೆ. ಸದನದಲ್ಲೂ ಈ ವಿಷಯ ಪ್ರಸ್ತಾಪಿಸುತ್ತೇವೆ ಎಂದು ನುಡಿದರು.
 
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ