ಕುಂದಾಪುರ: ಸಚಿವ ಸುರೇಶ್ ಕುಮಾರ್ ಅವರು ಕುಂದಾಪುರ ಹೆಸ್ಕುತ್ತೂರು ಸರಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯಶಿಕ್ಷಕರಾದ ಬಾಬು ಶೆಟ್ಟಿ ಅವರ ಕುರಿತು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಮೆಚ್ಚುಗೆಯ ನುಡಿಗಳನ್ನು ಬರೆದುಕೊಂಡಿದ್ದಾರೆ.
'ಉಡುಪಿಯಲ್ಲಿ SSLC ಪರೀಕ್ಷೆಗಳ ಸಿದ್ಧತೆಯ ಪರಿಶೀಲನಾ ಸಭೆ ನಡೆಸುತ್ತಿದ್ದಾಗ ಈ ಮಹನೀಯರ ಪರಿಚಯವಾಯಿತು. ಇವರ ಹೆಸರು ಶ್ರೀ # ಬಾಬು_ಶೆಟ್ಟಿ.
ಕುಂದಾಪುರ ವಲಯದ ಹೆಸ್ಕುತ್ತೂರು ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತನ್ನ ಶಾಲೆಯ SSLC ತರಗತಿಯ ನಲವತ್ತಮೂರು ಮಕ್ಕಳ ಮನೆಗೆ ತಾನೇ ತೆರಳಿ ಅವರಿಗೆ ಪಾಠ ಹೇಳಿ, ತಿಳಿಯದ ಸಂಗತಿಗಳ ಕುರಿತು ಮತ್ತೆ ಮತ್ತೆ ತಿಳುವಳಿಕೆ ನೀಡುತ್ತಿರುವ ಮಹನೀಯ.
ತನ್ನ ಶಾಲೆಯಲ್ಲಿ ಕಡುಬಡವ ವಿದ್ಯಾರ್ಥಿಗಳ ಮನೆಗೂ ಹೋಗಿ ತನ್ನ ಈ ಕಾಯಕ ಮಾಡುತ್ತಿರುವ ಈ ಪುಣ್ಯಾತ್ಮನಿಗೆ ಫೋನ್ ಮಾಡಿ ಅಭಿನಂದಿಸಿದೆ.
ಕಳೆದ 23 ವರ್ಷಗಳಿಂದ ತನ್ನ ತರಗತಿಯ ಮಕ್ಕಳು ನೂರಕ್ಕೆ ನೂರು ತೇರ್ಗಡೆಯಾಗುತ್ತಿರುವ ಸಂಗತಿಯನ್ನು ಬಹಳ ಹೆಮ್ಮೆಯಿಂದ, ಆದರೆ ವಿನೀತನಾಗಿ ಹಂಚಿಕೊಂಡರು. ಬಾಬು ಶೆಟ್ಟಿಯವರಂತಹ ಶಿಕ್ಷಕರೇ ನಮ್ಮ ಶಾಲೆಗಳ ವಿಶ್ವಾಸಾರ್ಹತೆ ಹೆಚ್ಚಿಸುತ್ತಿರುವವರು'. ಎಂದು ಸಚಿವ ಸುರೇಶ್ ಕುಮಾರ್ ಅವರು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದಿದ್ದಾರೆ