ಪರಪ್ಪನ ಅಗ್ರಹಾರ: ಮೊಬೈಲ್, ಗಾಂಜಾ, ಆಯುಧಗಳು ವಶ!

ಶನಿವಾರ, 10 ಜುಲೈ 2021 (09:25 IST)
ಬೆಂಗಳೂರು (ಜುಲೈ 10); ನಗರದಲ್ಲಿ ಬೀಡು ಬಿಟ್ಟಿರುವ ಮಾದಕ ವಸ್ತುಗಳ ಮಾರಾಟ ಜಾಲವನ್ನು ಬೇಧಿಸುವ ಸಲುವಾಗಿ ಸಿಸಿಬಿ ಪೊಲೀಸರು ಸಾಕಷ್ಟು ಶ್ರಮವಹಿಸುತ್ತಿದ್ದಾರೆ. ಕಳೆದ 6-7 ತಿಂಗಳಲ್ಲಿ ಸ್ಯಾಂಡಲ್ವುಡ್ ನಟಿಯರು ಸೇರಿದಂತೆ ಈ ಜಾಲದ ಭಾಗವಾಗಿದ್ದ ಎಲ್ಲಾ ಪೆಡ್ಲರ್ಗಳನ್ನು ಹೆಡೆಮುರಿಕಟ್ಟಿ ಜೈಲಿಗೆ ಬಿಟ್ಟುಬಂದಿದ್ದಾರೆ.

















 ಆದರೆ, ಬೆಂಗಳೂರು ನಗರದಲ್ಲಿ ಸಿಸಿಬಿ ಪೊಲೀಸರು ಮಾದಕ ವಸ್ತುಗಳ ವಿರುದ್ಧವಾಗಿ ಕಾರ್ಯಚರಣೆ ನಡೆಸುತ್ತಿದ್ದರೆ, ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹ ಜೈಲಿನಲ್ಲಿ ಪೊಲೀಸರೇ ಮಾದಕ ಜಾಲವನ್ನು ನಡೆಸುತ್ತಿರುವುದು ಹೇಯ ಕೃತ್ಯವಾಗಿದೆ. ಇಂದು ಬೆಳ್ಳಂ ಬೆಳಗ್ಗೆಯೇ ಜೈಲಿಗೆ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ್ದು, ಗಾಂಜಾ ಸೇರಿದಂತೆ ಮೊಬೈಲ್ ಹಾಗೂ ಅನೇಕ ಮಾರಕ ವಸ್ತುಗಳನ್ನು ಖೈದಿಗಳಿಂದ ವಶಕ್ಕೆ ಪಡೆದಿದ್ದಾರೆ.
ಪರಪ್ಪನ ಅಗ್ರಹಾರ ಕೇಂದ್ರ ಜೈಲಿನಲ್ಲಿ ಮಾದಕ ವಸ್ತುವಾದ ಗಾಂಜಾ ಮತ್ತು ಮೊಬೈಲ್ ಬಳಕೆ ಬಗ್ಗೆ ವ್ಯಾಪಕ ದೂರುಗಳು ಬರುತ್ತಿದ್ದವು, ಅಲ್ಲದೆ, ಖೈದಿಗಳು ಮಾರಕ ಅಸ್ತ್ರಗಳನ್ನೂ ಬಳಸುತ್ತಿದ್ದಾರೆ ಎಂಬ ದೂರು ಇತ್ತು. ಹೀಗಾಗಿ ಖಚಿತ ಮಾಹಿತಿಯ ಮೇರೆ ಸಿಸಿಬಿ ಪೊಲೀಸರು ಇಂದು ಬೆಳ್ಳಂಬೆಳಗ್ಗೆ 5 ಗಂಟೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿದ್ದಾರೆ. ಸುಮಾರು ನೂರಕ್ಕೂ ಅಧಿಕ ಸಿಬ್ಬಂದಿ ಹಾಗೂ ಶ್ವಾನದಳ ಜೊತೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ಗಾಂಜಾ, ಮೊಬೈಲ್ ಸೇರಿದಂತೆ ಅನೇಕ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.

ಜೈಲಿನ ಮೂಲೇ ಮೂಲೇ ಪರಿಶೀಲನೆ ನಡೆಸಿರುವ ಸಿಸಿಬಿ ಪೊಲೀಸರು. ಈ ವೇಳೆ ಜೈಲಿನ ವಸ್ತುಗಳನ್ನೆ ಆಯುಧಗಳನ್ನಾಗಿ ಮಾಡಿಕೊಂಡಿರುವ ಖೈದಿಗಳ ಬಳಿಯಿಂದ ಎಲ್ಲಾ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.ಖೈದಿಗಳು ಜೈಲಿನಲ್ಲಿ ನೀಡುವ ತಟ್ಟೆ, ಲೋಟ, ಕಬ್ಬಿಣದ ಸಲಾಕೆಗಳನ್ನು ಆಯುಧಗಳನ್ನಾಗಿ ಮಾಡಿಕೊಂಡಿರುವುದು ದಾಳಿಯ ವೇಳೆ ಬೆಳಕಿಗೆ ಬಂದಿದೆ. ಕಳೆದ ನಾಲ್ಕೈದು ದಿನಗಳ ಹಿಂದೆ ರಾಮನಗರ ಜೈಲಿನ ಮೇಲೂ ಸಿಸಿಬಿ ಪೊಲೀಸರಿಂದ ದಾಳಿ ನಡೆದಿತ್ತು. ಆದರೆ,
ಪರಪ್ಪನ ಅಗ್ರಹಾರದ ಜೈಲಿನ ಮೇಲಿನ ದಾಳಿ ಅನೇಕರ ಹುಬ್ಬೇರುವಂತೆ ಮಾಡಿದ್ದು, ಸಿಸಿಬಿ ಅಧಿಕಾರಿಗಳು ಯಾವ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ