ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿಯಲ್ಲಿ ಮಾತನಾಡಿದ್ದಾರೆ. ರಷ್ಯಾದೊಂದಿಗಿನ ಯುದ್ಧವನ್ನು ನಿಲ್ಲಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಅನುಸರಿಸುವ ಅಗತ್ಯವನ್ನು ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಒತ್ತಿ ಹೇಳಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನಡುವಿನ ವೈಷಮ್ಯವನ್ನು ಆದಷ್ಟು ಬೇಗ ಅಂತ್ಯಗೊಳಿಸಲು ಉಭಯ ದೇಶಗಳು ಪರಸ್ಪರ ಶಾಂತಿಯುತವಾಗಿ ಮಾತುಕತೆ ನಡೆಸಬೇಕು, ರಾಜತಾಂತ್ರಿಕತೆಯ ಹಾದಿಯನ್ನು ಅನುಸರಿಸಬೇಕು. ಸಂಘರ್ಷಕ್ಕೆ ಮಿಲಿಟರಿ ಯುದ್ಧವೇ ಪರಿಹಾರವಲ್ಲ ಎಂದು ಮೋದಿ ಸಲಹೆ ನೀಡಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಅಂತ್ಯಗೊಳಿಸಲು ಶಾಂತಿ ಪ್ರಯತ್ನ ಮಾಡುವುದಾದರೆ ಅದಕ್ಕೆ ಸಹಕರಿಸಲು ಭಾರತ ಸದಾ ಸಿದ್ಧವಿದೆ. ವಿಶ್ವಸಂಸ್ಥೆ, ಅಂತಾರಾಷ್ಟ್ರೀಯ ಕಾನೂನು, ಎಲ್ಲ ರಾಷ್ಟ್ರಗಳ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆಯನ್ನು ಎರಡೂ ದೇಶಗಳು ಗೌರವಿಸಬೇಕು ಎಂದು ಮೋದಿ ಸಲಹೆ ನೀಡಿದ್ದಾರೆ. ಪರಮಾಣು ದಾಳಿಯಿಂದ ಜನರ ಆರೋಗ್ಯ ಮತ್ತು ಪರಿಸರಕ್ಕೆ ತೀವ್ರ ಹಾನಿಯಾಗುತ್ತದೆ. ಹೀಗಾಗಿ, ಅದಕ್ಕೆ ಅವಕಾಶ ನೀಡಬೇಡಿ. ನ್ಯೂಕ್ಲಿಯರ್ ದಾಳಿ ಮುಂದೆ ದುರಂತದ ಪರಿಣಾಮಗಳನ್ನು ಉಂಟುಮಾಡಬಹುದು. ಸಂಘರ್ಷಕ್ಕೆ ಯಾವುದೇ ಮಿಲಿಟರಿಯಿಂದ ಪರಿಹಾರ ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.