ತಮ್ಮ ವಿವಿಧ ಬೇಡಿಕೆ ಈಡೇರಿಸುವಂತ ಆಗ್ರಹಿಸಿ ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರು ನಾಳೆ ಬೆಂಗಳೂರು ಚಲೋ ನಡೆಸೋ ಮೂಲಕ ಪ್ರತಿಭಟನೆಗೆ ಇಳಿಯಲಿದ್ದಾರೆ. ಈ ಹಿನ್ನಲೆಯಲ್ಲಿ ನಾಳೆ ಸರ್ಕಾರಿ ಆಸ್ಪತ್ರೆಗಳ ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ರಾಜ್ಯ ಸರ್ಕಾರ ಈವರೆಗೆ ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರ ಹಲವು ಬೇಡಿಕೆಗಳನ್ನು ಈಡೇರಿಸಿಲ್ಲ. ಮೌಲ್ಯಮಾಪನದಂತ ಪದ್ಧತಿಯನ್ನು ರದ್ದುಗೊಳಿಸಬೇಕು. ಶ್ರೀನಿವಾಸಾಚಾರಿ ವರದಿಯನ್ನು ಸರ್ಕಾರ ಜಾರಿಗೊಳಿಸಬೇಕು ಎಂಬುದಾಗಿ ಒತ್ತಾಯಿಸಿ ಜುಲೈ.7ರ ನಾಳೆ ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ. ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರೆಲ್ಲರೂ ಭಾಗವಹಿಸುವಂತೆ ರಾಜ್ಯಾಧ್ಯಕ್ಷ ವಿಶ್ವರಾಧ್ಯ ಯಾಮೋಜಿ ಹೇಳಿದ್ದಾರೆ.
ಮೂರು ತಿಂಗಳ ಮೌಲ್ಯಮಾಪವನ್ನು ರಾಜ್ಯ ಸರ್ಕಾರ ಒಂದು ವರ್ಷಕ್ಕೆ ನಿಗದಿ ಪಡಿಸಲಾಗಿದೆ. ನಮ್ಮ ಎಲ್ಲಾ ಬೇಡಿಕೆಗಳ ಸಂಬಂಧ ಮಾನ್ಯ ಆರೋಗ್ಯ ಸಚಿವರೊಂದಿಗೆ ಸಂಪೂರ್ಣ ಚರ್ಚೆ ನಡೆಸಲಾಗಿದೆ. ಆ ಎಲ್ಲಾ ಬೇಡಿಕೆಗಳನ್ನು ಈಡೇರಿಸಿ, ಸರ್ಕಾರ ಆದೇಶ ಹೊರಡಿಸಬೇಕು ಎಂದರು.
ನಾಳೆ ರಾಜ್ಯದ ಎಲ್ಲಾ ಜಿಲ್ಲೆಗಳ ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರು ಬೆಂಗಳೂರು ಚಲೋ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ನಗರ ಫ್ರೀಡಂ ಪಾರ್ಕ್ ನಲ್ಲಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಪೊಲೀಸ್ ಇಲಾಖೆಯಿಂದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನೀಡಲಾಗಿದೆ. ಜಿಲ್ಲಾ, ತಾಲೂಕು, ಗ್ರಾಮೀಣ ಭಾಗದಿಂದಲೂ ಗುತ್ತಿಗೆ, ಹೊರಗುತ್ತಿಗೆಯ ಸಾವಿರಾರು ನೌಕರರು ಈ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ನಮ್ಮ ಬೇಡಿಕೆ ಈಡೇರಿಸೋವರೆಗೆ ಪ್ರತಿಭಟನೆ ಮುಂದುವರೆಯಲಿದೆ. ರಾಜ್ಯ ಸರ್ಕಾರ ನಮ್ಮ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ಹೇಳಿದರು.