ಬೆಂಗಳೂರು: ಮೈಸೂರು ಅಭಿವೃದ್ಧಿ ಪ್ರಾಧಿಕಾರ ಹಗರಣದ ತನಿಖೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಪತ್ನಿ ಪಾರ್ವತಿ ಅಮಾಯಕರು ಎಂದಿರುವುದಲ್ಲದೆ, ಅವರೇ ನಿಜವಾದ ಸಂತ್ರಸ್ತರು ಎಂದು ವರದಿ ಕೊಟ್ಟಿದೆ ಎನ್ನಲಾಗಿದೆ.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿದ್ದರು. ಈ ತನಿಖೆಯ ವರದಿ ಸೋರಿಕೆಯಾಗಿದ್ದು, ಮುಖ್ಯಮಂತ್ರಿ ಮತ್ತು ಅವರ ಪತ್ನಿ ಪಾರ್ವತಿಗೆ ಕ್ಲೀನ್ ಚಿಟ್ ನೀಡಲಾಗಿದೆ ಎಂದು ಈಗಾಗಲೇ ಹೇಳಲಾಗಿತ್ತು. ಇದೀಗ ಮತ್ತಷ್ಟು ವಿವರಗಳು ಹೊರಬಿದ್ದಿದೆ.
ಪ್ರಕರಣದಲ್ಲಿ ನಿಜವಾದ ಸಂತ್ರಸ್ತರು ಸಿಎಂ ಕುಟುಂಬ ಎಂದು ಲೋಕಾಯುಕ್ತರು ವರದಿ ನೀಡಿರುವುದಾಗಿ ಹೇಳಲಾಗಿದೆ. ಸಿಎಂ ತಮ್ಮ ಪ್ರಭಾವ ಬಳಸಿ ಸೈಟು ಪಡೆದುಕೊಂಡಿಲ್ಲ. ಹಾಗೆಯೇ ಅವರ ಪತ್ನಿಯ ಗಮನಕ್ಕೂ ಬಾರದೇ ಕೆಲವು ಪತ್ರಗಳ ವ್ಯವಹಾರವಾಗಿದೆ. ಇದರಲ್ಲಿ ಸಿಎಂ ಮತ್ತು ಅವರ ಪತ್ನಿಯ ತಪ್ಪಿಲ್ಲ. ಕೆಲವು ಅಧಿಕಾರಿಗಳು ಮಾಡಿದ ಎಡವಟ್ಟಿನಿಂದಲೇ ಈ ರೀತಿ ಆಗಿದೆ ಎಂದು ಲೋಕಾ ವರದಿಯಲ್ಲಿ ಉಲ್ಲೇಖವಾಗಿದೆ ಎನ್ನಲಾಗಿದೆ.