ಬೆಂಗಳೂರು: ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ಇಂದು ನಡೆದಿದ್ದು, ವಾದ ಪ್ರತಿವಾದ ಆಲಿಸಿದ ಕೋರ್ಟ್ ಅರ್ಜಿ ವಿಚಾರಣೆಯನ್ನು ಆಗಸ್ಟ್ 31ಕ್ಕೆ ಮುಂದೂಡಿದೆ. ಇದರಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಎರಡು ದಿನಗಳ ಕಾಲ ರಿಲೀಫ್ ಸಿಕ್ಕಿದೆ.
ಇಂದು (ಆಗಸ್ಟ್ 29) ಹೈಕೋರ್ಟ್ ವಿಚಾರಣೆ ನಡೆಸಿದ್ದು, ಸಿಎಂ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಸುದೀರ್ಘವಾಗಿ ವಾದ ಮಂಡಿಸಿದರು. ಇನ್ನು ರಾಜ್ಯಪಾಲರ ಪರ ವಕೀಲ ತುಷಾರ್ ಮೆಹ್ತಾ ಅವರು ಶನಿವಾರ ವಾದ ಮಂಡಿಸುವುದಾಗಿ ಕೋರ್ಟ್ಗೆ ತಿಳಿಸಿದರು.
ಇದಕ್ಕೆ ಕೋರ್ಟ್ ಸಹ ಒಪ್ಪಿಗೆ ನೀಡಿದೆ. ಇದರೊಂದಿಗೆ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಕೋರ್ಟ್ ಇದೇ 31ಕ್ಕೆ ಮುಂದೂಡಿದೆ.
ಅಲ್ಲದೇ ಈ ಹಿಂದಿನ ಮಧ್ಯಂತರ ಆದೇಶವನ್ನು ಹೈಕೋರ್ಟ್ ಮುಂದುವರಿಸಿದೆ. ಇನ್ನು ವಿಚಾರಣೆ ಮುಂದೂಡುವಂತೆ ಜನಪ್ರತಿನಿಧಿಗಳ ಕೋರ್ಟ್ ಗೂ ಸಹ ಸೂಚನೆ ನೀಡಿದೆ.