ಮುಡಾ ಹಗರಣ: 2 ನಿವೇಶನಕ್ಕೆ ಅರ್ಹತೆ ಸಿಎಂ ಸಿದ್ದರಾಮಯ್ಯ ಪತ್ನಿಗೆ ನೀಡಿದ್ದು 14 ಸೈಟು

Krishnaveni K

ಬುಧವಾರ, 10 ಜುಲೈ 2024 (13:42 IST)
ಬೆಂಗಳೂರು: ಮೈಸೂರಿನ ಮೈಸೂರು ಅಭಿವೃದ್ಧಿ ಪ್ರಾಧಿಕಾರದ (ಮೂಡಾ) ಅವ್ಯವಹಾರಕ್ಕೆ ಸಂಬಂಧಿಸಿ ಬಿಜೆಪಿ ವತಿಯಿಂದ ಇದೇ 12ರಂದು ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಪ್ರಕಟಿಸಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಖುಷಿ ಬಂದಂತೆ ನಿವೇಶನ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ಈ ಹಗರಣವನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ. ಇದೇ 12ರಂದು ನಾನು, ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ್, ಬಿಜೆಪಿ ಶಾಸಕರು, ಕಾರ್ಯಕರ್ತರು
ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎಂದು ತಿಳಿಸಿದರು.

ಮುಖ್ಯಮಂತ್ರಿಗಳು ಬಡವರ ಬಗ್ಗೆ ಮೊಸಳೆಕಣ್ಣೀರು ಹಾಕುತ್ತಿದ್ದಾರೆ. ಬಡವರಿಗೆ ನಿವೇಶನ ಹಂಚಬೇಕು. ಈಗಾಗಲೇ ನಡೆದ ನಿವೇಶನ ಹಂಚಿಕೆಯನ್ನು ರದ್ದು ಮಾಡಬೇಕು. ಸಿಎಂ, ಅವರ ಪತ್ನಿ ಮೇಲೆ ಆರೋಪ ಇರುವ ಕಾರಣ ಮತ್ತೊಂದು ಎಸ್‍ಐಟಿ ಮಾಡಿ ತನಿಖೆ ನಡೆಸುವುದು ಸೂಕ್ತವಲ್ಲ;  ಈ ಭಾರಿ ಮೊತ್ತದ ಹಗರಣದ ತನಿಖೆಯನ್ನು ತಕ್ಷಣವೇ ಸಿಬಿಐಗೆ ಕೊಡಬೇಕು ಎಂದು ಆಗ್ರಹಿಸಿದರು.

ಶಾಸಕರು, ಸಿಎಂ ಪರಮಾಪ್ತರು ನಿನ್ನೆ ಪ್ರೆಸ್ ಮೀಟ್ ಮಾಡಿದ್ದಾರೆ. 92ರಲ್ಲಿ ಭೂ ವಶಕ್ಕೆ ಪಡೆಯುವ ಕೆಲಸ ಶುರುವಾಗಿದೆ. 2004ರಲ್ಲಿ ಪಾರ್ವತಮ್ಮ ಅವರ ಅಣ್ಣ ಜಮೀನು ಖರೀದಿ ಮಾಡಿದ್ದಾರೆ. ಮೂಡಾ ಸ್ವಾಧೀನದಲ್ಲಿದ್ದ ಜಾಗವನ್ನು ಮಲ್ಲಿಕಾರ್ಜುನ ಸ್ವಾಮಿ ಅವರು ಖರೀದಿ ಮಾಡಿದ್ದು ಹೇಗೆ? 2009- 10ರಲ್ಲಿ ಗಿಫ್ಟ್ ಡೀಡ್ ಆದಾಗಲೂ ಸಹ ಈ ಜಾಗವು ಮೂಡಾ ಆರ್‍ಟಿಸಿಯಲ್ಲಿ ನಮೂದಾಗಿತ್ತು. ಭೂಮಿ ಖರೀದಿ ಆಗಿ ಕನ್ವರ್ಷನ್ ಆಗಿತ್ತು. ಗಿಫ್ಟ್ ಡೀಡ್ ಎಂದು ಮಾಹಿತಿ ಕೊಡುವಾಗಲೂ ಅದು ಕೃಷಿ ಭೂಮಿ ಆಗಿರಲಿಲ್ಲ. ಇದು ಕೂಡ ತಪ್ಪು ಮಾಹಿತಿ ಎಂದು ಮಾಹಿತಿ ನೀಡಿದರು.
 
2 ನಿವೇಶನಕ್ಕೆ ಅರ್ಹತೆ- 14 ನಿವೇಶನ ಹಂಚಿಕೆ
2022ರ ಜನವರಿ 12ರಂದು ಕ್ರಯಪತ್ರ ಆಗಿದ್ದು, ಇದರಲ್ಲಿ ಗಮನಿಸಬೇಕಾದ ಅಂಶ ಏನೆಂದರೆ ಮೂಡಾ ಪ್ರೋತ್ಸಾಹದಾಯಕ ಯೋಜನೆಯಡಿಯಲ್ಲಿ ನಿಯಮಗಳು 1991ರ ಮೇರೆಗೆ ಎಂದು ಉಲ್ಲೇಖಿಸಿ 14 ಸೈಟ್ ಕೊಟ್ಟಿದ್ದಾರೆ. ಇದು ಕ್ರಯಪತ್ರದಲ್ಲಿ ಉಲ್ಲೇಖವಾಗಿದೆ. ಆದರೆ, 1991ರ ಕಾನೂನು ಪ್ರಕಾರ ಅವರಿಗೆ 1 ಎಕರೆ ಮೀರಿದ ಜಮೀನಾದರೆ 40-60 ಒಂದೇ ನಿವೇಶನ ಕೊಡಬೇಕು. 3ರಿಂದ 4 ಎಕರೆ ಆಗಿದ್ದರೆ 4,800 ಅಡಿಯ ನಿವೇಶನ (40-60ರ ಎರಡು ನಿವೇಶನ) ಕೊಡಬೇಕಿತ್ತು. ಮುಖ್ಯಮಂತ್ರಿಯವರ ಧರ್ಮಪತ್ನಿ ಪಾರ್ವತಮ್ಮ ಅವರಿಗೆ 2 ನಿವೇಶನ ಮಾತ್ರ ಕೊಡಬೇಕಿತ್ತು. 2 ನಿವೇಶನದ ಬದಲು 14 ನಿವೇಶನ ಕೊಟ್ಟಿದ್ದು, ಇದು ಸಂಪೂರ್ಣ ಕಾನೂನುಬಾಹಿರ ಎಂದು ವಿಜಯೇಂದ್ರ ಅವರು ಆಕ್ಷೇಪಿಸಿದರು.
 
ಮೈಸೂರಿನದು ಲ್ಯಾಂಡ್ ಸ್ಕ್ಯಾಮ್; ಮೂಡಾ ಪ್ರಾಧಿಕಾರದ ಭೂಮಿ ಸಂಬಂಧ ದೊಡ್ಡ ಹಗರಣ ಅಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಸಿದ್ದರಾಮಯ್ಯನವರು ಅನೇಕ ತಪ್ಪು ಮಾಹಿತಿ ನೀಡಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳ ಮುಖವಾಡ ಕಳಚಿಬಿದ್ದಿದೆ. ಹೇಗಾದರೂ ಬೆಲೆಬಾಳುವ ನಿವೇಶನ ಕಬಳಿಸಬೇಕು ಎಂದುಕೊಂಡು ನಿಯಮ ಗಾಳಿಗೆ ತೂರಿ ಅಕ್ರಮ ನಡೆಸಿದ್ದಾರೆ. ಈ ವಿಷಯದಲ್ಲಿ ಮುಖ್ಯಮಂತ್ರಿಗಳು ಜನತೆಗೆ ಉತ್ತರಿಸಬೇಕು. ಈ ಹಗರಣಕ್ಕೆ ಹೊಣೆ ಹೊರಬೇಕು ಎಂದು ಒತ್ತಾಯಿಸಿದರು.

ಮಹದೇವಪ್ಪನವರೇ ನಿನ್ನ ಹೆಂಡತಿಗೂ ಫ್ರೀ, ನನ್ನ ಹೆಂಡತಿಗೂ ಫ್ರೀ ಎಂದ ಸಿಎಂ, ಬಡ ಹೆಣ್ಮಕ್ಕಳಿಗೆ 2 ಸಾವಿರ ಕೊಟ್ಟರೆ, ತಮ್ಮ ಪತ್ನಿಗೆ 2 ಕೋಟಿಗೂ ಹೆಚ್ಚು ಮೌಲ್ಯದ 14 ನಿವೇಶನಗಳನ್ನು ಪಡೆದಿದ್ದಾರೆ. 63-64 ಕೋಟಿಗೂ ಹೆಚ್ಚು ಬೆಲೆಯ ನಿವೇಶನ ಪಡೆದುದನ್ನು ರಾಜ್ಯದ ಜನರೂ ಪ್ರಶ್ನೆ ಮಾಡುತ್ತಿದ್ದಾರೆ ಎಂದು ವಿಶ್ಲೇಷಿಸಿದರು.
 
ಚುನಾವಣಾ ನಿಯಮ ಉಲ್ಲಂಘನೆ
ತಮ್ಮ ಅವಧಿಯಲ್ಲಿ ಅವ್ಯವಹಾರ ನಡೆಸಿ, ತಾವೇ ಪರಿಹಾರ ಕೇಳಿರುವ ಮೊದಲ ಮುಖ್ಯಮಂತ್ರಿ ಇವರು. ಮೈಸೂರಿನ ಕೆಸರೇ ಗ್ರಾಮದ 3.16 ಎಕರೆ ಜಮೀನಿಗೆ ಬದಲಾಗಿ ತಮ್ಮ ಪತ್ನಿಗೆ 14 ನಿವೇಶನ ಮಂಜೂರು ಮಾಡಿಸಿಕೊಂಡಿದ್ದಾರೆ. ಅದರ ಬೆಲೆ 62 ಕೋಟಿ ಬರಬೇಕಿದ್ದು, 18 ಕೋಟಿಯ ನಿವೇಶನ ಪಡೆದುದಾಗಿ ಹೇಳಿದ್ದಾರೆ. ಆದರೆ, ಮಾನ್ಯ ಮುಖ್ಯಮಂತ್ರಿಗಳು 2013ರ ಚುನಾವಣಾ ಅಫಿಡವಿಟ್‍ನಲ್ಲಿ 3.16 ಎಕರೆ ಭೂಮಿಯನ್ನು ಉಲ್ಲೇಖಿಸಿಲ್ಲ. ಇದು ಚುನಾವಣೆ ನಿಯಮಗಳ ಉಲ್ಲಂಘನೆ. ಇದೆಲ್ಲವನ್ನೂ ಪರಿಶೀಲಿಸಿ ಚುನಾವಣಾ ಆಯೋಗಕ್ಕೆ ದೂರು ಕೊಡುವ ಕುರಿತು ನಿರ್ಧರಿಸುತ್ತೇವೆ ಎಂದು ಬಿ.ವೈ. ವಿಜಯೇಂದ್ರ ಅವರು ತಿಳಿಸಿದರು.
 
18 ಕೋಟಿಯ ನಿವೇಶನ ಲಭಿಸಿದೆ. ಆದರೆ, 62 ಕೋಟಿ ಮೌಲ್ಯದ ನಿವೇಶನಗಳು ಸಿಗಬೇಕಿತ್ತು ಎಂದು ತಪ್ಪು ಮಾಹಿತಿ ಕೊಟ್ಟಿದ್ದಾರೆ. ಮೂಡಾ ಹಗರಣದಲ್ಲಿ 2 ಪ್ರಕರಣಗಳಿವೆ. ಸಿಎಂ ಧರ್ಮಪತ್ನಿಗೆ ಕೊಟ್ಟ 14 ನಿವೇಶನಗಳದು ಒಂದು ಪ್ರಕರಣ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು ಓಡೋಡಿ ತರಾತುರಿಯಲ್ಲಿ ಮೈಸೂರಿಗೆ ಹೋಗಿ ಮೂಡಾ ಅಧಿಕಾರಿಗಳ ಸಭೆ ನಡೆಸಿದ್ದರು. ಸಭೆಯಲ್ಲಿ ಮಾಹಿತಿ ಪಡೆದು ಎಲ್ಲ ಅಧಿಕಾರಿಗಳನ್ನೂ ಏಕಾಏಕಿ ವರ್ಗಾವಣೆ ಮಾಡಿದ್ದಾರೆ ಎಂದು ಟೀಕಿಸಿದರು.
5 ಸಾವಿರ ಕೋಟಿಗೂ ಹೆಚ್ಚು ಮೌಲ್ಯದ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದ್ದಾರೆ. ಹಗರಣದಲ್ಲಿ ಒಳಗೊಂಡವರನ್ನು ಶಿಕ್ಷಿಸುವುದನ್ನು ತಪ್ಪಿಸಲು ಹಾಗೂ ರಕ್ಷಿಸಲು ಭೈರತಿ ಸುರೇಶ್ ಮುಂದಾಗಿದ್ದಾರೆ. ಮೂಡಾ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡಿ ವರದಿ ಕೊಟ್ಟ ಜಿಲ್ಲಾಧಿಕಾರಿಯನ್ನೂ ತರಾತುರಿಯಲ್ಲಿ ವರ್ಗಾವಣೆ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.

ಭೈರತಿ ಸುರೇಶ್ ಅವರು ಈ ಹಗರಣ ಮುಚ್ಚಿ ಹಾಕಲು ಎಲ್ಲ ಕಡತಗಳನ್ನು ಬೆಂಗಳೂರಿಗೆ ಒಯ್ದಿದ್ದಾರೆ. ಹಗರಣ ಮುಚ್ಚಿ ಹಾಕುವ ಕೆಲಸ ನಡೆಯುತ್ತಲೇ ಇದೆ. ಸಿಎಂ ಕೂಡ ಮೈಸೂರು ಜಿಲ್ಲೆಯವರು. ಅತಿ ದೊಡ್ಡ ಭ್ರಷ್ಟಾಚಾರ ಹಗರಣವಿದು. ಎಲ್ಲ ಕಡತ ಮುಚ್ಚಿಡಲು ಭೈರತಿ ಸುರೇಶ್ ಮುಂದಾಗಿದ್ದಾರೆ ಎಂದ ಅವರು, ದೇವನೂರು ಜಮೀನಿನ ಬೆಲೆ ಬಗ್ಗೆ ಸಿಎಂ ಮಾತನಾಡುತ್ತಾರೆ. ಗೈಡ್‍ಲೈನ್ ಮೌಲ್ಯ 1,300 ರೂ. ಇದ್ದರೆ 9 ಸಾವಿರ ಮಾರುಕಟ್ಟೆ ಮೌಲ್ಯ ಇದೆ. 2 ಸೈಟಿಗೆ ಮಾತ್ರ ಅವರು ಅರ್ಹರಾಗಿದ್ದರು ಎಂದು ಪುನರುಚ್ಚರಿಸಿದರು.

ಮೂಡಾ ಅವ್ಯವಹಾರಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿಗಳ ವರದಿಯ ಬಳಿಕವೂ 15-6-2024ರಲ್ಲಿ ಸುಮಾರು 42 ಸೈಟ್‍ಗಳನ್ನು ಒಬ್ಬರಿಗೆ ಬದಲಿಯಾಗಿ ಕೊಟ್ಟಿದ್ದಾರೆ. ಇಂಥ ಸಾವಿರಾರು ನಿವೇಶನಗಳನ್ನು ಈ ಸರಕಾರ ಕಾನೂನುಬಾಹಿರವಾಗಿ ಕೊಟ್ಟಿದೆ. ಬಡವರು, ದಲಿತರು, ಪರಿಶಿಷ್ಟ ಸಮುದಾಯಕ್ಕೆ ಮೀಸಲಿಟ್ಟ ನಿವೇಶನಗಳನ್ನು ತಮಗೆ ಬೇಕಾದಂತೆ ಹಂಚಿದ್ದಾರೆ. ಸಿಬಿಐ ತನಿಖೆ ಮಾತ್ರವಲ್ಲದೆ ಮುಖ್ಯಮಂತ್ರಿಗಳು ತಮ್ಮ ಹುದ್ದೆಗೆ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ಸದನದಲ್ಲೂ ಈ ವಿಚಾರವನ್ನು ಕೈಗೆತ್ತಿಕೊಳ್ಳುತ್ತೇವೆ. ಸದನದ ಹೊರಗೆ ಕೂಡ ಈ ಸಂಬಂಧ ಬಿಜೆಪಿಯಿಂದ ಹೋರಾಟ ನಡೆಯಲಿದೆ ಎಂದು ತಿಳಿಸಿದರು.

ವಾಲ್ಮೀಕಿ ನಿಗಮದ ಹಗರಣ ಸಂಬಂಧ ಪ್ರಶ್ನೆಗೆ ಉತ್ತರಿಸಿದ ಅವರು, ದಲಿತರಿಗೆ ಮೀಸಲಿಟ್ಟ ಹಣವನ್ನು
ಚುನಾವಣೆಗೆ ಬಳಸಿಕೊಂಡಿದ್ದಾರೆ. ದದ್ದಲ್, ನಾಗೇಂದ್ರರನ್ನು ಎಸ್‍ಐಟಿ ತನಿಖೆಗೆ ಕರೆಯಲು ಬಿಜೆಪಿ ಪ್ರತಿಭಟನೆಯೇ ಕಾರಣ. ಆದರೂ, ಇದು ತಿಪ್ಪೆ ಸಾರಿಸುವ ಕೆಲಸ. ಇ.ಡಿ. ಇವತ್ತು ದಾಳಿ ಮಾಡಿದ್ದನ್ನು ನಾವು ಸ್ವಾಗತಿಸುತ್ತೇವೆ. ಎಸ್‍ಐಟಿ ನಿಧಾನವಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ರಾಜ್ಯ ಸರಕಾರವು ಸಚಿವರು, ಶಾಸಕರನ್ನು ರಕ್ಷಿಸಲು ಮುಂದಾಗಿತ್ತು ಎಂದು ದೂರಿದರು.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯ ಪತ್ರದ ಬಳಿಕ ಸಿಬಿಐ ತನಿಖೆ ಕೈಗೆತ್ತಿಕೊಂಡಿದೆ. ಒಂದೆಡೆ ಎಸ್‍ಐಟಿ ತನಿಖೆ ನಡೆದರೆ, ಇ.ಡಿ ದಾಳಿಯೂ ಆಗಿದೆ. ಇತಿಹಾಸದಲ್ಲಿ ಕಂಡು ಕೇಳರಿಯದ ಹಗರಣ ಇದಾಗಿದೆ. ದಲಿತರಿಗೆ ಮೀಸಲಿಟ್ಟ ಹಣವನ್ನು ದುರುಪಯೋಗ ಮಾಡಿ, ಹೊರರಾಜ್ಯಕ್ಕೆ ವರ್ಗಾವಣೆ ಮಾಡಿ, ಚುನಾವಣೆಗಳಿಗೆ ಹಣ ದುರ್ಬಳಕೆ ಮಾಡಿದ್ದಾರೆ ಎಂದು ಟೀಕಿಸಿದರು.

ಸಾಮಾಜಿಕ ನ್ಯಾಯದ ಭರವಸೆ ಕೊಟ್ಟು ಸಿಎಂ ಆಗಿರುವ ಸಿದ್ದರಾಮಯ್ಯನವರು ಮಾತ್ರವಲ್ಲದೆ ಅವರ ಸರಕಾರದ ಸಚಿವರ ಬಣ್ಣ ಬಯಲಾಗಿದೆ. ಕಾಂಗ್ರೆಸ್ ಪಕ್ಷದ ಈ ಸರಕಾರದ ದಲಿತ ವಿರೋಧಿ ನೀತಿಗಳೂ ಅನಾವರಣಗೊಂಡಿವೆ ಎಂದು ಅವರು ನುಡಿದರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ