ಏನೂ ಮಾಡಿಲ್ಲ ಅಂದ್ರೆ ಡಿಸಿ ವರ್ಗಾವಣೆ ಮಾಡಿದ್ದು ಯಾಕೋ: ಸಿದ್ದರಾಮಯ್ಯಗೆ ಪ್ರಲ್ಹಾದ್ ಜೋಶಿ ಪ್ರಶ್ನೆ

Krishnaveni K

ಶನಿವಾರ, 6 ಜುಲೈ 2024 (14:21 IST)
ಬೆಂಗಳೂರು: ಮುಡಾ ಹಗರಣದಲ್ಲಿ ನಾನೇನು ಮಾಡಿಲ್ಲ, ನನ್ನದು ತಪ್ಪಿಲ್ಲ ಎನ್ನುವ ಸಿಎಂ ಸಿದ್ದರಾಮಯ್ಯ ಈಗ ಹಗರಣ ಹೊರತಂದ ಡಿಸಿ ರಾಜೇಂದ್ರ ಅವರನ್ನು ವರ್ಗಾವಣೆ ಮಾಡಿರುವ ಉದ್ದೇಶವಾದರೂ ಏನು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರಶ್ನಿಸಿದ್ದಾರೆ.

ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ ಸಿಎಂ ಸಿದ್ದರಾಮಯ್ಯ ಪತ್ನಿ ಹೆಸರಿಗೆ ಅಕ್ರಮವಾಗಿ ಸೈಟು ಹಂಚಿಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಪ್ರಕರಣದ ಬಗ್ಗೆ ಬಿಜೆಪಿ ಭಾರೀ ಪ್ರತಿಭಟನೆ ನಡೆಸುತ್ತಿದೆ. ಪ್ರಕರಣವನ್ನು ಸಿಬಿಐಗೊಪ್ಪಿಸಬೇಕು ಎಂದು ಒತ್ತಾಯ ಮಾಡುತ್ತಿದೆ.

ಈ ನಡುವೆ ರಾಜ್ಯ ಸರ್ಕಾರ ಹಲವು ಐಎಎಸ್ ಅಧಿಕಾರಿಗಳ ಎತ್ತಂಗಡಿ ಮಾಡಿದ್ದು, ಆ ಪೈಕಿ ಮುಡಾ ಹಗರಣವನ್ನು ಬಯಲಿಗೆಳೆದ ಮೈಸೂರು ಜಿಲ್ಲಾಧಿಕಾರಿ ಕೆವಿ ರಾಜೇಂದ್ರ ಕೂಡಾ ಸೇರಿದ್ದಾರೆ. ಈ ಪ್ರಕರಣ ಬಿಜೆಪಿ ಕಾಲದಲ್ಲಿ ನಡೆದಿದ್ದು ಎನ್ನುವುದು ಸಿದ್ದರಾಮಯ್ಯ ವಾದ.

ಇದಕ್ಕೆ ಟಾಂಗ್ ಕೊಟ್ಟಿರುವ ಪ್ರಲ್ಹಾದ್ ಜೋಶಿ ಎಲ್ಲವೂ ಬಿಜೆಪಿ ಕಾಲದಲ್ಲಿ ನಡೆದಿದ್ದು ಎನ್ನುವುದಾದರೆ ಡಿಸಿಯವರನ್ನು ವರ್ಗಾವಣೆ ಯಾಕೆ ಮಾಡಿದ್ರಿ? ಅವ್ಯವಹಾರ ನಡೆಯುತ್ತಿದೆ ಎಂದು ಡಿಸಿ ಪತ್ರ ಬರೆದಿದ್ದರು. ಅದರಲ್ಲಿ ಸಿದ್ದರಾಮಯ್ಯ ಮತ್ತು ಪುತ್ರನ ಹೆಸರೂ ಇದೆ. ಅದೇ ಕಾರಣಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಸಿದ್ದರಾಮಯ್ಯ ಏನೂ ಮಾಡಿಲ್ಲ ಎಂದಾದರೆ ಪ್ರಕರಣವನ್ನು ಸಿಬಿಐ ತನಿಖೆಗೊಪ್ಪಿಸಲಿ. ಒಂದೆಡೆ ವಾಲ್ಮೀಕಿ ಹಗರಣ, ಇನ್ನೊಂದೆಡೆ ಮುಡಾ ಹಗರಣ. ಒಟ್ಟಾರೆ ಸಿಎಂ ಸಿದ್ದರಾಮಯ್ಯನವರದ್ದು ಕಡು ಭ್ರಷ್ಟ ಸರ್ಕಾರ ಎಂದು ಅವರು ಟೀಕಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ