ಮುಸ್ಲಿಂ ವಿದ್ಯಾರ್ಥಿಗಳಿಗೆ ಹಾಲ್ ಟಿಕೇಟ್ ನಿರಾಕರಣೆ..!

ಗುರುವಾರ, 27 ಅಕ್ಟೋಬರ್ 2016 (12:07 IST)
ಮಂಗಳೂರು: ಮೂವತ್ತು ಮಂದಿ ಮುಸ್ಲಿಂ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪ್ರವೇಶ ಪತ್ರ ನೀಡಲು ನಿರಾಕರಿಸುತ್ತಿದ್ದ ಮಿಲಾಗ್ರಿಸ್ ಕಾಲೇಜಿನ ಪ್ರವೇಶ ದ್ವಾರದ ಗೇಟ್‌ಗೆ ವಿದ್ಯಾರ್ಥಿಗಳು ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ.
 
ಮೊದಲನೆ ಸೆಮಿಸ್ಟರ್ ಪರೀಕ್ಷೆಗೆ ಆರಂಭವಾಗುತ್ತಿದ್ದು, ವಿದ್ಯಾರ್ಥಿಗಳು ವಾರದಿಂದ ಪ್ರವೇಶ ಪತ್ರಕ್ಕಾಗಿ ಕಾಲೇಜನ್ನು ಎಡತಾಕುತ್ತಿದ್ದರು‌. ಆದರೆ ಕಾಲೇಜಿನ ಆಡಳಿತ ಮಂಡಳಿ ಮೂವತ್ತು ಮುಸ್ಲಿಂ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ನೀಡಲು ಸತಾಯಿಸುತ್ತಿತ್ತು. ಪರೀಕ್ಷಾ ಸಂದರ್ಭದಲ್ಲಿ ಆಡಳಿತ ತೋರುತ್ತಿರುವ ವರ್ತನೆಯಿಂದ ಕೆರಳಿದ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿ, ಘೋಷಣೆ ಕೂಗಿದರು. ಅಲ್ಲದೆ, ಕಾಲೇಜ್ ಗೇಟ್ ಗೆ ಬೀಗ ಜಡಿದು ಪ್ರತಿಭಟಿಸುವ ಮೂಲಕ ಪ್ರವೇಶ ಪತ್ರಕ್ಕಾಗಿ ಆಗ್ರಹಿಸಿದರು.
 
ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿಗಳು, ಮಿಲಾಗ್ರಿಸ್ ಕಾಲೇಜಿನ ಆಡಳಿತ ಮಂಡಳಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿದೆ. 7 ಮಂದಿ ಕ್ರಿಶ್ಚಿಯನ್ ವಿದ್ಯಾರ್ಥಿಗಳಿಗೆ ಹಾಜರಾತಿ ಕಡಿಮೆಯಿದ್ದರೂ ಹಾಲ್ ಟಿಕೆಟ್ ನೀಡಿ ಪರೀಕ್ಷೆಗೆ ಅನುಮತಿ ನೀಡಿದೆ. ನಾವು ಮುಸ್ಲಿಂರು ಎನ್ನುವ ಕಾರಣಕ್ಕೆ ಸತಾಯಿಸುತ್ತಿದ್ದಾರೆ. ಪ್ರಾಚಾರ್ಯರು ಸ್ವಜನ ಪಕ್ಷಪಾತ ಮಾಡುತ್ತಿದ್ದು, ಕೂಡಲೇ ನಮಗೆ ನ್ಯಾಯ ದೊರಕಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ