ವೀರಶೈವ ಸ್ವಾಮೀಜಿ ಆಸನದ ಮೇಲೆ ಮುಸ್ಲಿಂ ಯುವಕ..!

ಗುರುವಾರ, 27 ಅಕ್ಟೋಬರ್ 2016 (11:58 IST)
ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಕುಳಿತುಕೊಳ್ಳುವ ಆಸನದ ಮೇಲೆ ಮುಸ್ಲಿಂ ಯುವಕನೊಬ್ಬ ಕುಳಿತು ಫೋಟೋ ತೆಗೆಸಿಕೊಂಡಿರುವ ಘಟನೆ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿದೆ.
 
ತಾಲೂಕಿನ ಬಿಳಿಜೋಡು ಗ್ರಾಮದ ಹಾರಿಸ್ ಖಾನ್, ಇಪ್ಪತ್ತೊಂದು ವಯಸ್ಸಿನ ಯುವಕನೇ, ಈ ಪ್ರಕ್ಷುಬ್ಧ ಘಟನೆಗೆ ಕಾರಣವಾಗಿದ್ದಾನೆ. ವೀರಶೈವ ಪಂಚಪೀಠಗಳಲ್ಲಿ ಒಂದಾದ ಉಜ್ಜಿನಿ ಪೀಠದ ಶಾಖಾ ಮಠವಾಗಿರುವ ಕಣ್ವಕುಪ್ಪೆ ಮಠದೊಳಗೆ, ಯಾರೂ ಇಲ್ಲದ ಸಮಯ ನೋಡಿ, ಈತ ಒಳಹೋಗಿ ಫೋಟೋ ತೆಗಿಸಿಕೊಂಡಿದ್ದಾನೆ ಎನ್ನಲಾಗುತ್ತಿದೆ.
 
ಮಠಕ್ಕೆ ಆಗಮಿಸುವ ಭಕ್ತರಿಗೆ ಸ್ವಾಮೀಜಿ ದರ್ಶನ ನೀಡುವ ಮಂದಿರದ ಮುಂಭಾಗದಲ್ಲಿರುವ ಆಸನದ ಮೇಲೆ, ಯುವಕ ಕಾಲಮೇಲೆ  ಕಾಲು ಹಾಕಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದಾನೆ. ಅಲ್ಲದೆ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಅದರ ಜೊತೆಗೆ, ' ಹಮ್ ಹಥಿಯಾರ ತೋ ಸಿರ್ಪ್ ಶೌಕ್ ಕೇ ಲಿಯೇ ರಖ್ ತೇ  ಹೈ. ಕೌಫ್ ಕೇ ಲಿಯೇ ಬಸ್ ನಾಮ್ ಹೀ ಕಾಫೀ ಹೈ'( ಆಯುಧಗಳು ಶೋಕಿಗಾಗಿ ಮಾತ್ರ. ಹೆದರಿಸಲು ನನ್ನ ಹೆಸರೇ ಸಾಕು) ಎಂದು ಸ್ಟೇಟಸ್ ಹಾಕಿದ್ದಾನೆ. ಯುವಕನ ವರ್ತನೆ ಮಠದ ಭಕ್ತರಿಗೆ ತೀವ್ರ ನೋವನ್ನುಂಟು ಮಾಡಿದೆ ಎಂದು ಭಕ್ತರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
 
ಘಟನೆಯಿಂದ ಆಕ್ರೋಶಿತರಾದ ಭಕ್ತರು ಯುವಕನನ್ನು ಹಿಗ್ಗಾಮುಗ್ಗಾ ಥಳಿದು, ಆಸ್ಪತ್ರೆಗೆ ಸೇರುವಂತೆ ಮಾಡಿದ್ದಾರೆ. ಪ್ರಕರಣ ಜಗಳೂರು ಠಾಣೆಯಲ್ಲಿ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ