ವಕ್ಫ್ ಮಂಡಳಿಯ ಕ್ರಮಕ್ಕೆ ಮುಸ್ಲಿಂ ಸಮುದಾಯದ ಜನರು ಫುಲ್ ಗರಂ ಆಗಿದ್ದಾರೆ.
ಇನಾಂ ಜಮೀನನ್ನು ವಕ್ಫ್ ಆಸ್ತಿಯನ್ನಾಗಿ ದಾಖಲಿಸುತ್ತಿರುವ ಸರ್ಕಾರದ ಕ್ರಮ ಖಂಡಿಸಿ ಸೆ.30 ರಂದು ಧಾರವಾಡದ ಕಲಾಭವನ ಮೈದಾನದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಹೀಗಂತ ಇನಾಂ ಜಮೀನು ಹೋರಾಟಗಾರ ಮಹ್ಮದ ಯಾಸೀನ ಮುಲ್ಲಾ ಹೇಳಿದ್ದಾರೆ.
ಹಿಂದಿನ ಕಾಲದಲ್ಲಿ ರಾಜರುಗಳ ಕಾಲದಲ್ಲಿ ಸಮಾಜ ಸೇವೆ ಮಾಡಿದ ಜನರಿಗೆ ರಾಜ ಮೆಚ್ಚಿ ಇನಾಂ ಜಮೀನುಗಳನ್ನು ನೀಡಿದ್ದನು. ಅವರನ್ನು ಮತ್ತಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಲು ಪ್ರೋತ್ಸಾಹಿಸುತ್ತಿದ್ದರು. ಆದರೆ 1971 ರಲ್ಲಿ ಜಾರಿಯಾದ ಉಳುವವನೇ ಭೂಮಿಯ ಒಡೆಯ ಕಾಯಿದೆ ಜಾರಿಗೆ ತಂದ ಹಿನ್ನಲೆಯಲ್ಲಿ ಇನಾಂ ಜಮೀನುಗಳನ್ನು ಕೆಲವು ಜನಗಳು ಬಿಟ್ಟು ಅನ್ಯ ಊರುಗಳಿಗೆ ಹೋದಾಗ ಅವುಗಳು ಅನ್ಯರ ಪಾಲಾದವು. ಇದರಲ್ಲಿ ಇದೀಗ ಶೇ.30 ರಷ್ಟು ಮಾತ್ರ ಇನಾಂ ಜಮೀನು ಹೊಂದಿದ ಜನರಿದ್ದು, ಆ ಜಮೀನನ್ನು ಕೂಡಾ ಸರ್ಕಾರ ಯಾವುದೇ ನೋಟಿಸ್ ನೀಡದೇ ವಕ್ಫ್ ಇಲಾಖೆಯ ಮೂಲಕ ಇನಾಂ ಭೂಮಿಗಳನ್ನು ವಾಪಾಸ್ ಪಡೆಯುತ್ತಿವೆ.
ಇದಕ್ಕೆ ಉದಾಹರಣೆಗೆ ಎಂಬಂತೆ ನವಲಗುಂದ ತಾಲೂಕಿನ ಕೊಣ್ಣೂರ, ಕರ್ಲಗಟ್ಟಿ, ಸುರಕೋಡ, ಕಣಗಿಕೊಪ್ಪ ಸೇರಿದಂತೆ 160 ಹಳ್ಳಿಗಳ 482 ಎಕರೆ 15 ಗುಂಟೆ ಜಮೀನನ್ನು 30 ವರ್ಷಗಳ ಹಿಂದೆ ನೊಂದಣಿ ಮಾಡಿಕೊಂಡಿದ್ದಾರೆ. ಆದರೆ ಸರಕಾರ ಮಾ.21 ರಂದು ಈ ಎಲ್ಲ ಜಮೀನು ವಕ್ಫ್ ಮಂಡಳಿಗೆ ಸಂಬಂಧಿಸಿದ್ದೆಂದು ಆದೇಶ ಹೊರಡಿಸಿದೆ. ಈ ಇನಾಮಿ ಜಮೀನನ್ನು ಶೇ.60 ರಿಂದ 70 ರಷ್ಟು ರೈತರಿಗೆ ಮಾರಿದ್ದು, ಉಳಿದ ಶೇ.30 ರಷ್ಟು ಭೂಮಿ ಮಾತ್ರ ಉಳಿದಿವೆ. ಅದು ಕೂಡಾ ಮುಲ್ಲಾ, ಖತೀಬ, ಖಾಜಿ, ಮುಜಾವರ, ಮಕಾನದಾರ ಪಂಗಡಗಳು ಮಾತ್ರ ಉಳಿಸಿಕೊಂಡಿವೆ.
ಇದೀಗ ಈ ಜಮೀನುಗಳನ್ನು ವಕ್ಫ್ ಇಲಾಖೆ ತನ್ನ ಹೆಸರನ್ನು ನೋಂದಾಯಿಸುತ್ತಿದೆ ಇದು ಖಂಡನೀಯವಾಗಿದ್ದು ಕೂಡಲೇ ಜಮೀನುಗಳನ್ನು ವಾಪಸ್ ಪಡೆಯುವುದು ನಿಲ್ಲಿಸಬೇಕು. ಹೀಗಾಗಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದ್ದು, ಅಂದು ಐದು ತಾಲೂಕುಗಳ ಇನಾಂ ಭೂಮಿ ಪಡೆದ ಜನರು ಭಾಗಿಯಾಗಲಿದ್ದಾರೆ ಎಂದರು.