ಬಿಜೆಪಿಗೆ ಮತ ಹಾಕಿದ ಮುಸ್ಲಿಮರು ನಮ್ಮ ಧರ್ಮದವರೇ ಅಲ್ಲ ಎಂದ ಸಚಿವ ಜಮೀರ್ ಅಹ್ಮದ್
ಸೋಮವಾರ, 4 ಫೆಬ್ರವರಿ 2019 (11:39 IST)
ಬೆಂಗಳೂರು : ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಮರು ಬಿಜೆಪಿಗೆ ಮತ ಹಾಕಿದರೆ ಅಂಥವರು ನಮ್ಮ ಧರ್ಮದವರೇ ಅಲ್ಲ ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಅಖಿಲ ಭಾರತ ಜಮಿಯತ್ ಉಲ್ ಮನ್ಸೂರ್ ಸಂಘಟನೆಯ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಿದ ಅವರು ಜನರನ್ನುದ್ದೇಶಿಸಿ ಮಾತನಾಡುವಾಗ ಈ ಹೇಳಿಕೆಯನ್ನು ನೀಡಿದ್ದಾರೆ. ‘ಲೋಕಸಭೆ ಚುನಾವಣೆಯಲ್ಲಿ ಮೋದಿಯನ್ನು ಸೋಲಿಸಲು ಜಾತ್ಯತೀತ ಪಕ್ಷಗಳು ಒಟ್ಟಾಗಿ ಹೋರಾಟ ಮಾಡಲಿವೆ. ಇದಕ್ಕೆ ಮುಸ್ಲಿಮರು ಬೆಂಬಲ ನೀಡಬೇಕು. ಮತ್ತೆ ಮೋದಿ ಪ್ರಧಾನಿಯಾದರೆ ಜಾತ್ಯತೀತ ಪಕ್ಷಗಳು ಹಾಗೂ ಅಲ್ಪಸಂಖ್ಯಾತರಿಗೆ ಉಳಿಗಾಲವಿಲ್ಲ’ ಎಂದು ಹೇಳಿದ್ದಾರೆ.
ಹಾಗೇ ‘ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 20 ರಲ್ಲಿ ಮುಸ್ಲಿಂ ಮತದಾರರ ಸಂಖ್ಯೆ 2 ರಿಂದ 5 ಲಕ್ಷದಷ್ಟಿದೆ. ಎಲ್ಲರೂ ಒಂದೇ ಪಕ್ಷಕ್ಕೆ ಶೇ. 100 ರಷ್ಟು ಮತಹಾಕಿದರೆ ಕಾಂಗ್ರೆಸ್ 20 ಸೀಟು ಗೆಲ್ಲುವುದು ಕಷ್ಟವಲ್ಲ. ಈ ಅಂಶಗಳನ್ನು ಗಮನಿಸಿ ಬಿಜೆಪಿ ಸೋಲಿಸಲು ಮುಸ್ಲಿಮರು ಒಗ್ಗಟ್ಟು ಪ್ರದರ್ಶಿಸಬೇಕಿದೆ’ ಎಂದು ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.