ವಾರಾಣಸಿ(ಜು.25): ಕಾಶಿ ವಿಶ್ವನಾಥ ದೇವಾಲಯ ಧಾಮ ನಿರ್ಮಾಣಕ್ಕಾಗಿ ಗ್ಯಾನ್ವಾಪಿ ಮಸೀದಿಯ ಪಕ್ಕದ 1700 ಚರದ ಅಡಿಯ ಜಾಗವನ್ನು ಬಿಟ್ಟುಕೊಡಲು ಮುಸ್ಲಿಂ ಸಮುದಾಯ ಒಪ್ಪಿಗೆ ಸೂಚಿಸಿದೆ. ಈ ಜಾಗಕ್ಕೆ ಬದಲಾಗಿ ಇನ್ನೊಂದು ಕಡೆಯಲ್ಲಿ ಮುಸ್ಲಿಮರಿಗೆ ಕಾಶಿ ವಿಶ್ವನಾಥ ದೇವಾಲಯ ಟ್ರಸ್ಟ್ 1000 ಚದರ ಕಿ.ಮೀ.ಜಾಗವನ್ನು ನೀಡಲಿದೆ.
ಇದರಿಂದಾಗಿ ಕಾಶಿ ದೇವಾಲಯ ಕಾರಿಡಾರ್ ನಿರ್ಮಾಣಕ್ಕೆ ಇದ್ದ ಅಡೆತಡೆಗಳು ನಿವಾರಣೆ ಆಗಿವೆ.
ಈ ಯೋಜನೆ ಪೂರ್ಣಗೊಂಡ ಬಳಿಕ ಕಾಶಿ ವಿಶ್ವನಾಥ ದೇವಾಲಯ ಪ್ರಮುಖ ಪ್ರವಾಸಿ ಕೇಂದ್ರ ಎನಿಸಿಕೊಳ್ಳಲಿದೆ. ಕಾಶಿ ವಿಶ್ವನಾಥ ದೇವಾಲಯದಿಂದ ಮಣಿಕರ್ಣಿಕಾ, ಜಲಸೇನ್ ಮತ್ತು ಲಲಿತಾ ಘಾಟ್ಗಳಿಗೆ ನೇರ ಸಂಪರ್ಕ ಸಾಧ್ಯವಾಗಲಿದೆ. ಅಲ್ಲದೇ ಕಾಶಿ ವಿಶ್ವನಾಥ ದೇವಾಲಯದಿಂದಲೇ ಗಂಗಾ ಆರತಿಯನ್ನು ವೀಕ್ಷಿಸಬಹುದಾಗಿದೆ.
ಕಾಶಿ ವಿಶ್ವನಾಥ ದೇವಾಲಯದ ಸುತ್ತಮುತ್ತ ಅನೇಕ ಕಟ್ಟಡಗಳು ಕಾರಿಡಾರ್ ನಿರ್ಮಾಣಕ್ಕೆ ಅಡ್ಡಿ ಆಗಿದ್ದವು. ಕಾರಿಡಾರ್ ನಿರ್ಮಾಣಕ್ಕೆ ತೆರವುಗೊಳಿಸಬೇಕಾದ 166 ಕಟ್ಟಡಗಳನ್ನು ಗುರುತಿಸಲಾಗಿದೆ. ಇದರಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಜಾಗವೂ ಸೇರಿತ್ತು. ಈ ನಿಟ್ಟಿನಲ್ಲಿ ಕಾಶಿ ವಿಶ್ವನಾಥ ದೇವಾಲಯ ಮುಸ್ಲಿಂ ಸಮುದಾಯದ ಜೊತೆ ಮಾತುಕತೆ ನಡೆಸಿ ಜು.9ರಂದು ಜಮೀನನ್ನು ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಒಪ್ಪಂದವನ್ನು ಅಂತಿಮಗೊಳಿಸಿತ್ತು. ಈ ಬಗ್ಗೆ ಈ ಅಧಿಕೃತ ಪ್ರಕಟಣೆ ಹೊರಬಿದ್ದಿದೆ.
ಇದೇ ವೇಳೆ ಮಸೀದಿ ಹಾಗೂ ವಿಶ್ವನಾಥ ದೇವಾಲಯದ ಸಂಪೂರ್ಣ ಆವರಣಕ್ಕೆ ಸಂಬಂಧಿಸಿದಂತೆ ಪುರಾತತ್ವ ಇಲಾಖೆ ಕೈಗೊಂಡ ಸರ್ವೇ ವಿವಾದ ಇನ್ನೂ ಕೊನೆಗೊಂಡಿಲ್ಲ. ಈ ವಿಷಯಾಗಿ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ