ನಾಡಹಬ್ಬ ಮೈಸೂರು ದಸರಾ 2022ಕ್ಕೆ ಕ್ಷಣಗಣನೆ ಆರಂಭವಾತ್ತಿದ್ದಂತೆ ಕರ್ನಾಟಕದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಗರಿಗೆದರಿವೆ. ಸೆಪ್ಟೆಂಬರ್ 26ರಂದು ಚಾಮುಂಡಿ ಬೆಟ್ಟದ ಮೇಲೆ ರಾಷ್ಟ್ರಪತಿ ದ್ರೌಪದಿ ಮುರ್ಮು ದಸರಾ ಉತ್ಸವವನ್ನು ಉದ್ಘಾಟಿಸಲಿದ್ದಾರೆ.
ದ್ರೌಪದಿ ಮುರ್ಮು ದಸರಾ ಉದ್ಘಾಟನೆಯಲ್ಲಿ ಭಾಗವಹಿಸುವ ಮೊದಲ ರಾಷ್ಟ್ರಪತಿಯಾಗಲಿದ್ದಾರೆ. ಜೂನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರು ನಗರದಲ್ಲಿದ್ದನ್ನು ನಾವು ಸ್ಮರಿಸಬಹುದು.
ಮೈಸೂರು ದಸರಾದ 412 ನೇ ಆವೃತ್ತಿಯ ಅದ್ದೂರಿ ಆಚರಣೆಗೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಅಧಿಕಾರಿಗಳು ದಸರಾ ಉಪ ಸಮಿತಿಗಳ ಸದಸ್ಯರೊಂದಿಗೆ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ ಮತ್ತು ಸಾರ್ವಜನಿಕರಿಂದ ಸಲಹೆಗಳನ್ನು ಪಡೆಯುತ್ತಿದ್ದಾರೆ.
ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಕಳೆದ ಎರಡು ವರ್ಷಗಳಿಂದ ದಸರಾ ಆಚರಣೆ ಸರಳವಾಗಿ ನಡೆದಿತ್ತು. ಈ ವರ್ಷ ಸಾಂಕ್ರಾಮಿಕ ರೋಗವು ನಿಯಂತ್ರಣದಲ್ಲಿರುವದರಿಂದ ಪ್ರವಾಸೋದ್ಯಮದ ಮಧ್ಯಸ್ಥಗಾರರ ಸಲಹೆಯಂತೆ ಸರ್ಕಾರವು ಅದ್ಧೂರಿ ದಸರಾ ಆಚರಿಸಲು ನಿರ್ಧರಿಸಿದೆ.