ಬೆಂಗಳೂರು: ಕರ್ನಾಟಕ ಬಜೆಟ್ ಘೋಷಣೆಯಾದ ಬೆನ್ನಲ್ಲೇ ಜನರಿಗೆ ಹಾಲಿನ ದರದ ಶಾಕ್ ಸಿಗಲಿದೆ. ಸದ್ಯದಲ್ಲೇ ನಂದಿನಿ ಹಾಲಿನ ದರ ಏರಿಕೆಯಾಗಲಿದ್ದು, ಜೊತೆಗೆ ಹಾಲಿನ ಪ್ರಮಾಣವೂ ಕಡಿತವಾಗಲಿದೆ.
ನಂದಿನಿ ಹಾಲಿನ ದರ ಹೆಚ್ಚಳ ಪ್ರಸ್ತಾಪ ಕಳೆದ ಡಿಸೆಂಬರ್ ನಿಂದಲೂ ಕೇಳಿಬರುತ್ತಿದೆ. ಈಗಾಗಲೇ ಕೆಎಂಎಫ್ ಹಾಲಿನ ದರ ಏರಿಕೆ ಮಾಡುವ ಪ್ರಸ್ತಾವವನ್ನು ಸರ್ಕಾರದ ಮುಂದಿಟ್ಟಿತ್ತು. ಆದರೆ ಯಾವುದಕ್ಕೂ ಬಜೆಟ್ ಮುಗಿಯಲಿ ಎಂದು ಸರ್ಕಾರ ಮುಂದೂಡಿತ್ತು.
ಇದೀಗ ನಿನ್ನೆಯಷ್ಟೇ ಬಜೆಟ್ ಮಂಡನೆಯಾಗಿದ್ದು ಇನ್ನೀಗ ಹಾಲಿನ ದರ ಏರಿಕೆಯಾಗುವುದು ಖಚಿತವಾಗಿದೆ. ಈ ಬಗ್ಗೆ ಸ್ವತಃ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ತಿಳಿಸಿದ್ದಾರೆ. ಈ ಬಾರಿ 5 ರೂ. ನಷ್ಟು ಪ್ರತೀ ಲೀಟರ್ ಹಾಲಿನ ದರ ಏರಿಕೆಯಾಗಲಿದೆ ಎಂದಿದ್ದಾರೆ.
ಕೇವಲ ಹಾಲಿನ ದರ ಏರಿಕೆ ಮಾತ್ರವಲ್ಲ, ಈ ಹಿಂದೆ 2 ರೂ. ದರ ಹೆಚ್ಚಳ ಮಾಡಿದ್ದಾರೆ ಜನರಿಗೆ 50 ಎಂಎಲ್ ಹೆಚ್ಚುವರಿ ಹಾಲು ನೀಡಿ ಜನರ ಮೂಗಿಗೆ ತುಪ್ಪ ಸವರಲಾಗಿತ್ತು. ಇದೀಗ ಆ ಹೆಚ್ಚುವರಿ ಹಾಲಿಗೂ ಕಡಿವಾಣ ಬೀಳಲಿದೆ. ಹೀಗಾಗಿ ಜನರಿಗೆ ಡಬಲ್ ಶಾಕ್ ಕಾದಿದೆ.