ಹುಬ್ಬಳ್ಳಿ: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಹುಬ್ಬಳ್ಳಿಯ ನೇಹಾ ಹಂತಕ ಫಯಾಜ್ ಕತೆ ಈಗ ಏನಾಗಿದೆ ನೋಡಿ. ಈ ಪ್ರಕರಣದಲ್ಲಿ ಧಾರವಾಡ ಹೈಕೋರ್ಟ್ ಪೀಠ ಮಹತ್ವದ ತೀರ್ಪು ನೀಡಿದೆ.
ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದ ನೇಹಾಳನ್ನು ಆಕೆಯ ಸಹಪಾಠಿಯಾಗಿದ್ದ ಫಯಾಜ್ ಎಂಬಾತ ಕಾಲೇಜು ಆವರಣದಲ್ಲೇ ಬರ್ಬರವಾಗಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ. ಆ ಕ್ಷಣವೇ ಆತನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ್ದರು.
ಪ್ರೀತಿ ನಿರಾಕರಿಸಿದ್ದಕ್ಕೆ ನೇಹಾಳನ್ನು ಆತ ಹತ್ಯೆ ಮಾಡಿದ್ದ. ಈ ಸಂಬಂಧ ಆತ ಹುಬ್ಬಳ್ಳಿಯ 1 ನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ. ಆದರೆ ಅಲ್ಲಿ ಜಾಮೀನು ತಿರಸ್ಕೃತಗೊಂಡಿತ್ತು. ಹೀಗಾಗಿ ಆತ ಇದನ್ನು ಪ್ರಶ್ನಿಸಿ ಧಾರವಾಡ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ.
ಇದೀಗ ಧಾರವಾಡ ಹೈಕೋರ್ಟ್ ಪೀಠವೂ ಆತನ ಜಾಮೀನು ಅರ್ಜಿ ತಿರಸ್ಕರಿಸಿದೆ. ಇದರಿಂದಾಗಿ ಆತ ಜೈಲಿನಲ್ಲೇ ಕಂಬಿ ಎಣಿಸಬೇಕಾಗಿದೆ. ಏಪ್ರಿಲ್ 8, 2024 ರಂದು ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಘಟನೆ ನಡೆದಿತ್ತು.