ಎಲ್ಲಾ ಬೆಲೆ ಏರಿಕೆ ಮಾಡಿ ಫ್ರೀ ಗ್ಯಾರಂಟಿ ಅಂತ ಕೊಡ್ತಿದ್ದಾರೆ: ಹಾಲಿನ ದರ ಏರಿಕೆಗೆ ಸಾರ್ವಜನಿಕರಿಂದ ಭಾರೀ ಆಕ್ರೋಶ

Krishnaveni K

ಶನಿವಾರ, 14 ಸೆಪ್ಟಂಬರ್ 2024 (10:59 IST)
ಬೆಂಗಳೂರು: ಸಿಎಂ ಸಿದ್ದರಾಮಯ್ಯ ನಿನ್ನೆ ನಂದಿನಿ ಹಾಲಿನ ದರ ಏರಿಕೆ ಮಾಡುವ ಬಗ್ಗೆ ಸುಳಿವು ನೀಡಿರುವುದು ಜನರ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಎಲ್ಲಾ ವಸ್ತುಗಳ ಬೆಲೆ ಏರಿಕೆ ಮಾಡಿ ಫ್ರೀ ಗ್ಯಾರಂಟಿ ಕೊಡ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
 
ಕೆಲವು ದಿನಗಳ ಹಿಂದಷ್ಟೇ ಹಾಲಿನ ದರ 2 ರೂ.ಗಳಷ್ಟು ಏರಿಕೆಯಾಗಿತ್ತು. ಆಗ ಬೆಲೆ ಏರಿಕೆ ಮಾಡಿದರೇನಂತೆ ನಾವು 50 ಎಂಎಲ್ ಹಾಲು ಹೆಚ್ಚು ಕೊಡ್ತೇವೆ ಎಂದು ರಾಜ್ಯ ಸರ್ಕಾರ ಸಮಜಾಯಿಷಿ ನೀಡಿತ್ತು. ಆದರೆ ಇದೀಗ ಮತ್ತೆ ನಂದಿನಿ ಹಾಲಿನ ದರ ಏರಿಕೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಹಾಲಿನ ದರ ಏರಿಕೆಯ ಪರಿಣಾಮ ನೇರವಾಗಿ ತಟ್ಟುವುದು ಮಧ್ಯಮ ವರ್ಗದವರಿಗೆ. ಹಾಲು, ಪೆಟ್ರೋಲ್, ಡೀಸೆಲ್ ನಂತಹ ದಿನ ಬಳಕೆಯ ವಸ್ತುಗಳ ಬೆಲೆಯನ್ನೆಲ್ಲಾ ಏರಿಕೆ ಮಾಡಿ ಫ್ರೀ ಗ್ಯಾರಂಟಿ ಕೊಡ್ತೀವಿ ಎಂದು ಏನು ಪ್ರಯೋಜನ? ನಮಗೆ ಇದರಿಂದ ಜೀವನ ಮತ್ತಷ್ಟು ದುಬಾರಿಯೇ ಹೊರತು ಬೇರೆ ಏನೂ ಪ್ರಯೋಜನವಿಲ್ಲ. ಫ್ರೀ ಗ್ಯಾರಂಟಿ ಯೋಜನೆ ಕೊಡಿ ಎಂದು ನಾವು ಕೇಳಿದ್ದೆವಾ? ಈಗ್ಯಾಕೆ ರೈತರ ಹೆಸರಿನಲ್ಲಿ ಬೆಲೆ ಏರಿಕೆ ಮಾಡುತ್ತಿದ್ದೀರಿ ಎಂದು ಸರ್ಕಾರದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತೀ ಬಾರಿಯೂ ಸರ್ಕಾರ ಬೆಲೆ ಏರಿಕೆ ಮಾಡುವಾಗ ರೈತರು ಅಥವಾ ಬೇರೆ ರಾಜ್ಯಗಳಲ್ಲಿ ನಮಗಿಂತ ಹೆಚ್ಚು ಬೆಲೆಯಿದೆ ಎಂದು ಸಬೂಬು ನೀಡುತ್ತದೆ. ಆದರೆ ಇದರಿಂದ ಹೊರೆಯಾಗುತ್ತಿರುವುದು ಮಧ್ಯಮ ವರ್ಗದವರಿಗೆ. ರೈತರಿಗೂ ಇದರ ಪಾಲು ಸರಿಯಾಗಿ ಸಿಗುತ್ತಿಲ್ಲ. ಇದೀಗ ಆಕ್ರೋಶದ ನಡುವೆಯೂ ಸರ್ಕಾರ 5 ರೂ.ವರೆಗೆ ಹಾಲಿನ ದರ ಏರಿಕೆ ಮಾಡಲು ಹೊರಟಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ