ಬೆಂಗಳೂರು: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಅಮೆರಿಕದಲ್ಲಿ ಭಾರತದ ವಿರುದ್ಧ ಮಾತನಾಡಿದ್ದು, ಇದನ್ನು ದೇಶ ಗಂಭೀರವಾಗಿ ಪರಿಗಣಿಸುತ್ತಿದೆ. ರಾಹುಲ್ ಗಾಂಧಿಯವರ ಮಾತುಗಳು ಸುಳ್ಳಿನಿಂದ ಕೂಡಿರುವುದಷ್ಟೇ ಅಲ್ಲದೆ, ಭಾರತವನ್ನು ವಿರೋಧಿಸುವ ಶಕ್ತಿಗಳಿಗೆ ಹೊಸ ಜೀವ ನೀಡಿ ಹೊಸ ಶಕ್ತಿ ಕೊಟ್ಟಂತೆ ಕಾಣಿಸುತ್ತಿದೆ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟೀಯ ಅಧ್ಯಕ್ಷ ಮತ್ತು ಸಂಸದ ತೇಜಸ್ವಿಸೂರ್ಯ ಅವರು ಆಕ್ಷೇಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದೇಶದಲ್ಲಿ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ ವ್ಯಕ್ತಿಗಳ ಹಿನ್ನೆಲೆಯನ್ನು ಗಮನಿಸಿದರೆ, ಯಾರು ಭಾರತದ ವಿರೋಧಿಗಳಿದ್ದಾರೋ ಅವರ ಜೊತೆ ರಾಹುಲ್ ಗಾಂಧಿಯವರು ಸ್ನೇಹಿತರಾಗಿರುವುದು ಸ್ಪಷ್ಟಗೊಳ್ಳುತ್ತದೆ ಎಂದು ತಿಳಿಸಿದರು.
ಇಂಡಿಯಾಸ್ ಎನಿಮೀಸ್ ಆರ್ ರಾಹುಲ್ ಗಾಂಧಿಸ್ ಫ್ರೆಂಡ್ಸ್ ಎಂದ ಅವರು, ಇದು ರಾಹುಲ್ ಗಾಂಧಿಯವರ ವರ್ತನೆ, ಅವರು ವಿದೇಶದಲ್ಲಿ ಆಡಿದ ಮಾತುಗಳು, ಭೇಟಿ ಮಾಡಿದ ಜನರಿಂದ ಬಹಳ ಸ್ಪಷ್ಟವಾಗುತ್ತಿದೆ ಎಂದು ವಿಶ್ಲೇಷಿಸಿದರು.
ದೇಶದ ಒಳಗಡೆ ರಾಹುಲ್ ಗಾಂಧಿಯವರು, ಬಿಜೆಪಿ ಮೀಸಲಾತಿಯನ್ನು ರದ್ದು ಮಾಡುತ್ತದೆ; ಜಾತಿ ಆಧಾರದ ಗಣತಿ ಮಾಡಿ, ಒಬಿಸಿ, ಎಸ್‍ಸಿ, ಎಸ್‍ಟಿಗಳಿಗೆ ಅನ್ಯಾಯ ಆಗುತ್ತಿದೆ ಎಂದು ಭಾಷಣ ಮಾಡುತ್ತಾರೆ. ಆದರೆ, ವಿದೇಶದಲ್ಲಿ ಹೋದ ತಕ್ಷಣವೇ ಅಮೆರಿಕದಲ್ಲಿ ಇದ್ದ ತಕ್ಷಣ ಇಂಗ್ಲಿಷ್‍ನಲ್ಲಿ ಮಾತನಾಡುವುದರಿಂದ ಇಲ್ಲಿನವರು ಕೇಳಿಸಿಕೊಳ್ಳಲಾರರು ಅಂದುಕೊಂಡು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಸಿಕ್ಕಿದಾಗ ಮೀಸಲಾತಿ ರದ್ದು ಮಾಡುವುದಾಗಿ ಭಾಷಣ ಮಾಡುತ್ತಾರೆ ಎಂದು ವಿವರಿಸಿದರು.
ನಿರಂತರವಾಗಿ ಮೀಸಲಾತಿ ವಿರೋಧಿಸಿದ್ದ ಕಾಂಗ್ರೆಸ್ ಮುಖಂಡರು
ಈ ಆಷಾಡಭೂತಿತನ (ಹಿಪೋಕ್ರಸಿ) ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಾರ್ಟಿಯ ರಾಜಕೀಯವನ್ನು ಜನರಿಗೆ ತೋರಿಸುತ್ತಿದೆ. ರಾಹುಲ್ ಗಾಂಧಿಯವರು ಮೀಸಲಾತಿ ರದ್ದು ಮಾಡುವುದಾಗಿ ಅಮೆರಿಕದಲ್ಲಿ ಭಾಷಣ ಮಾಡಿದ್ದು ನನಗಂತೂ ಆಶ್ಚರ್ಯಕ್ಕೆ ಕಾರಣವಾಗಿಲ್ಲ. ರಾಹುಲ್ ಗಾಂಧಿಯ ಕಾಂಗ್ರೆಸ್ ಪಾರ್ಟಿ ತನ್ನ ಇತಿಹಾಸದಲ್ಲಿ ನೆಹರೂ ಅವರಿಂದ ಪ್ರಾರಂಭಿಸಿ ರಾಜೀವ್ ಗಾಂಧಿ ವರೆಗೆ ಮೀಸಲಾತಿಯನ್ನು ವಿರೋಧಿಸಿತ್ತು ಎಂದು ತೇಜಸ್ವಿಸೂರ್ಯ ಅವರು ಗಮನ ಸೆಳೆದರು.
ಮೀಸಲಾತಿ ಶುರು ಮಾಡಬೇಕೆಂಬ ಸಂದರ್ಭದಲ್ಲಿ ನೆಹರೂ ಅವರು ದೇಶದ ಎಲ್ಲ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಇದರಿಂದ ದೇಶಕ್ಕೆ ಲುಕ್ಸಾನು (ನಷ್ಟ) ಆಗಲಿದೆ ಎಂದು ತಿಳಿಸಿದ್ದರು. ಒಬಿಸಿಗಳಿಗೆ ಮೀಸಲಾತಿ ಕೊಡಲು ಕಾಕಾ ಕಾಲೇಕರ್ ಸಮಿತಿ ರಚಿಸಿ, 1956ರಲ್ಲೇ ವರದಿ ನೀಡಿದ್ದರು. ಆ ವರದಿಯನ್ನು ಕಸದ ಬುಟ್ಟಿಯಲ್ಲಿಟ್ಟಿದ್ದರು. ಒಬಿಸಿಗಳಿಗೆ ವಿ.ಪಿ.ಸಿಂಗ್ ಅವರು ಅಧಿಕಾರಕ್ಕೆ ಬಂದು ಮಂಡಲ್ ಮೀಸಲಾತಿ ಕೊಡುವವರೆಗೆ ಕೂಡ ಶೀತಲೀಕೃತ ಘಟಕದಲ್ಲಿ (ಕೋಲ್ಡ್ ಸ್ಟೋರೇಜ್) ಇಟ್ಟದ್ದು ಕಾಂಗ್ರೆಸ್ ಪಕ್ಷ ಎಂದು ಟೀಕಿಸಿದರು. ವಿ.ಪಿ.ಸಿಂಗ್ ಅವರ ಸರಕಾರ ಅಧಿಕಾರಕ್ಕೆ ಬಂದು ಮಂಡಲ್ ಆಯೋಗದ ಶಿಫಾರಸು ಜಾರಿಗೊಳಿಸಲು ಮುಂದಾದಾಗ ಕೂಡ ರಾಜೀವ್ ಗಾಂಧಿಯವರು ಆಗಿನ ವಿಪಕ್ಷ ನಾಯಕರಾಗಿ, ಕಾಂಗ್ರೆಸ್ ಪಾರ್ಟಿ ಅಧಿಕೃತ ಮುಖಂಡರಾಗಿ ಗರಿಷ್ಠ ವಿರೋಧ ಮಾಡಿದ್ದರು ಎಂದರು. ರಾಹುಲ್ ಗಾಂಧಿಯವರ ತಂದೆ ಮಂಡಲ್ ಕಮಿಷನ್ ಶಿಫಾರಸು ವಿರೋಧಿಸಿ ಅತ್ಯಂತ ದೊಡ್ಡ ಭಾಷಣ ಮಾಡಿದ್ದರು ಎಂದು ತಿಳಿಸಿದರು.
ರಾಹುಲ್ ಗಾಂಧಿಯವರು ಅಮೆರಿಕದಲ್ಲಿ ಭೇಟಿ ಮಾಡಿದ ವ್ಯಕ್ತಿಗಳ ಚಾರಿತ್ರ್ಯ, ಹಿನ್ನೆಲೆ ಕೇಳಿದರೆ ಆಶ್ಚರ್ಯಪಡುವಂತಿದೆ. ಭಾರತದ ವಿರುದ್ಧ ಅಮೆರಿಕದಲ್ಲಿ, ಅಮೆರಿಕದ ಸಂಸತ್ತಿನಲ್ಲಿ ನಿರಂತರವಾಗಿ ಮಾತನಾಡಿದ, ಭಾರತ ವಿರೋಧಿ ಕಾರ್ಯಕರ್ತರಾದ ಇಲ್ಹನ್ ಒಮರ್ ಅವರನ್ನು ರಾಹುಲ್ ಗಾಂಧಿಯವರು ಭೇಟಿ ಮಾಡಿದ್ದಾರೆ. ಜಮ್ಮು- ಕಾಶ್ಮೀರದಲ್ಲಿ ಭಾರತವು ಮಾನವ ಹಕ್ಕುಗಳನ್ನು ಉಲ್ಲಂಘಿಸಿದ್ದಾಗಿ ಪ್ರಸ್ತಾಪಿಸಿದ ವ್ಯಕ್ತಿ ಇವರು ಎಂದು ವಿವರಿಸಿದರು.
ಭಾರತೀಯ ಪ್ರಜೆಗಳಿಗೆ ಅಮೆರಿಕದಲ್ಲಿ ಫಾಸ್ಟ್ ಟ್ರ್ಯಾಕ್‍ನಲ್ಲಿ ಪೌರತ್ವ- ಗ್ರೀನ್ ಕಾರ್ಡ್ ಕೊಡಬೇಕೆಂಬ ಪ್ರಸ್ತಾವವನ್ನು ಅಮೆರಿಕದ ಕಾಂಗ್ರೆಸ್‍ನಲ್ಲಿ (ಸದನದಲ್ಲಿ) ವಿರೋಧಿಸಿದವರು ಇದೇ ಇಲ್ಹನ್ ಒಮರ್. ಇದೇ ಇಲ್ಹನ್ ಒಮರ್ ಅನ್ನು ಭೇಟಿ ಮಾಡಿ, ಅವರ ಜೊತೆ ವೇದಿಕೆ ಹಂಚಿಕೊಂಡು, ರಾಹುಲ್ ಗಾಂಧಿಯವರ ಮಾತುಗಳಿಗೆ ಇಲ್ಹನ್ ಒಮರ್ ಸಮ್ಮತಿ ವ್ಯಕ್ತಪಡಿಸಿದ್ದಾರೆ ಎಂದರೆ, ಇದಕ್ಕಿಂತ ಅಸಹ್ಯಕರ ನಡವಳಿಕೆ ವಿಪಕ್ಷ ನಾಯಕನದ್ದಾಗಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಮಂಡಲ್ ಆಯೋಗದ ಶಿಕ್ಷಣ- ಉದ್ಯೋಗದಲ್ಲಿ ಮೀಸಲಾತಿಯ ಪ್ರಸ್ತಾಪ ಬಂದಾಗ ರಾಜೀವ್ ಗಾಂಧಿಯವರು ನವ ಭಾರತ್ ಟೈಮ್ಸ್ ಎಂಬ ಪತ್ರಿಕೆಗೆ ಸಂದರ್ಶನ ನೀಡಿ ರಿಸರ್ವೇಶನ್ ಕೊಡುವ ನೆಪದಲ್ಲಿ ನಾವು ಬುದ್ದುಗಳಿಗೆ ಪ್ರೋತ್ಸಾಹ ಕೊಡಲು ಆಗುವುದಿಲ್ಲ ಎಂದು ಹೇಳಿ ಈ ದೇಶದ ಒಬಿಸಿ, ಎಸ್‍ಸಿ, ಎಸ್‍ಟಿ ವರ್ಗಕ್ಕೆ ಅನ್ಯಾಯ, ಅಪಮಾನ ಮಾಡಿ ಮಾತನಾಡಿದ್ದರು; ಇದು ದಾಖಲೆಯಲ್ಲಿದೆ ಎಂದು ಗಮನಕ್ಕೆ ತಂದರು.
ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರುವವರೆಗೆ ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ದರ್ಜೆ ಲಭಿಸಿರಲಿಲ್ಲ. ಕೇಂದ್ರೀಯ ವಿದ್ಯಾಲಯ, ನವೋದಯ ಶಾಲೆಗಳಲ್ಲಿ, ಮೆಡಿಕಲ್ ಕಾಲೇಜ್, ನೀಟ್ ಪರೀಕ್ಷೆಯಲ್ಲಿ ಒಬಿಸಿಗಳಿಗೆ ಶೇ 27 ಮೀಸಲಾತಿ ಕೊಟ್ಟಿರಲಿಲ್ಲ. ಈ ಎಲ್ಲ ಸತ್ಯ ಒಂದೆಡೆ ಇದ್ದರೂ ಕೂಡ ಭಾರತದ ಒಳಗಡೆ ಬಂದಾಗ ಮೀಸಲಾತಿ ಪರವಾಗಿ, ಜಾತಿ ಗಣತಿ ಮಾಡಿ ಎಂಬ ಭಾಷಣ ಮಾಡಿ, ಅಮೆರಿಕಕ್ಕೆ ಹೋದ ತಕ್ಷಣವೇ ನಾವು ಮೀಸಲಾತಿ ತೆಗೆದುಹಾಕುವುದಾಗಿ ಮಾತನಾಡುವ ರಾಹುಲ್ ಗಾಂಧಿಯ ಆಷಾಡಭೂತಿತನವನ್ನು ಇವತ್ತು ದೇಶದ ಜನರು ಪ್ರಶ್ನಿಸುತ್ತಿದ್ದಾರೆ ಎಂದು ತಿಳಿಸಿದರು.
ಭಾರತವಿರೋಧಿ ಧೋರಣೆ ಇರುವ ಬಾಂಗ್ಲಾದೇಶದ ಮುಶ್ಫಿಕಲ್ ಫಜಲ್ ಎಂಬ ಪತ್ರಕರ್ತರ ಜೊತೆ ರಾಹುಲ್ ಗಾಂಧಿಯವರು ಯಾಕೆ ಓಡಾಡಬೇಕು? ಅವರ ಜೊತೆ ಯಾಕೆ ವೇದಿಕೆ ಹಂಚಿಕೊಳ್ಳಬೇಕು ಎಂದು ಕೇಳಿದರು. ರಾಹುಲ್ ಗಾಂಧಿಯವರು ಅಮೆರಿಕದಲ್ಲಿ ಸಿಕ್ಖ್ ಫಾರ್ ಜಸ್ಟಿಸ್, ಪನ್ನು ರೀತಿಯ ಖಲಿಸ್ಥಾನಿ ಏಜೆಂಟ್‍ಗಳ ಜೊತೆ ಪತ್ರಿಕಾಗೋಷ್ಠಿ, ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ರಾಹುಲ್ ಗಾಂಧಿಯವರು ಹೇಳಿದ ಮಾತನ್ನು ಅವರು ಕೂಡ ಸಮರ್ಥಿಸಿದ್ದಾಗಿ ವಿವರ ನೀಡಿದರು.