ರಾಷ್ಟ್ರೀಯ ಶಿಕ್ಷಣ ನೀತಿ ರಾಷ್ಟ್ರೀಯ ಅಗತ್ಯ: ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ
ಶುಕ್ರವಾರ, 20 ಆಗಸ್ಟ್ 2021 (15:40 IST)
ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯಿಂದ ನಮ್ಮ ದೇಶದ ಬೆಳವಣಿಗೆಯ
ಸ್ವರೂಪವೇ ಬದಲಾಗಲಿದ್ದು, ವಿನಾಕಾರಣ ಈ ನೀತಿಯ ಬಗ್ಗೆ ಅಪಸ್ವರ ಎತ್ತುವುದು ಸರಿಯಲ್ಲ ಎಂದು ಉನ್ನತ ಶಿಕ್ಷಣ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಬೆಂಗಳೂರಿನಲ್ಲಿ ಗುರುವಾರದಂದು ಬಿಜೆಪಿ ಹಮ್ಮಿಕೊಂಡಿದ್ದ ಕೇಂದ್ರ ಸಚಿವರ ಜನಾಶೀರ್ವಾದ ಯಾತ್ರೆ ನಿಮಿತ್ತ ನಡೆದ ಬುದ್ಧಿಜೀವಿಗಳು ಮತ್ತು ವಿವಿಧ ಕ್ಷೇತ್ರಗಳ ವೃತ್ತಿಪರರ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣ ನೀತಿ ರಚನೆಯ ಹಿಂದೆ ಅನೇಕ ಶ್ರೇಷ್ಠ ಮಿದುಳುಗಳು ಕೆಲಸ ಮಾಡಿವೆ. ಕನ್ನಡಿಗರೇ ಆದ ಡಾ.ಕಸ್ತೂರಿ ರಂಗನ್ ಅವರ ನೇತೃತ್ವದಲ್ಲಿ ನಮ್ಮ ನಾಡಿನ ಹೆಸರಾಂತ ತಜ್ಞರು, ವಿಜ್ಞಾನಿಗಳು, ಶಿಕ್ಷಣ ಕ್ಷೇತ್ರದ ನಿಪುಣರು ಅಹರ್ನಿಷಿ ದುಡಿದಿದ್ದಾರೆ. ಐದೂವರೆ ವರ್ಷ ಕಾಲ ನಿರಂತರ ಅಧ್ಯಯನ, ಸಂವಾದದಿಂದ ಈ ನೀತಿ ರೂಪಿತವಾಗಿದೆ ಎಂದರು.
ಸುಮಾರು 35 ವರ್ಷಗಳ ನಂತರ ನಮ್ಮ ದೇಶದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ರೂಪಿತವಾಗಿದೆ. ಈ ಶಿಕ್ಷಣ ನೀತಿಯು ʼರಾಷ್ಟ್ರೀಯ ಅಗತ್ಯʼವೇ ಆಗಿತ್ತು ಎಂದು ನಿರ್ವಿವಾದವಾಗಿ ನಾನು ಹೇಳಬಲ್ಲೆ. ಸಾಂಪ್ರದಾಯಿಕವಾದ ಶಿಕ್ಷಣ ಪದ್ಧತಿಯಿಂದ ಕುಶಲತೆ ಹಾಗೂ ಜ್ಞಾನಕ್ಕೆ ಬರ ಉಂಟಾಗಿತ್ತು. ಅಂಥ ಕೊರತೆಯನ್ನು ಶಿಕ್ಷಣ ನೀತಿ ನೀಗಿಸುತ್ತಿದೆ ಎಂದು ಅವರು ಪ್ರತಿಪಾದಿಸಿದರು.
ಕೆಲವರಿಗೆ ಇದು ಅರ್ಥವಾಗುತ್ತಿಲ್ಲ. ಇಡೀ ದೇಶಕ್ಕೆ ಹೊಸ ತಿರುವು, ವೇಗ ನೀಡಬಲ್ಲ ಶಿಕ್ಷಣ ನೀತಿಯ ಬಗ್ಗೆ ತಿಳಿಯುತ್ತಿಲ್ಲ. ಅಂಥವರು ಮೊದಲು ನೀತಿಯನ್ನು ಆಳವಾಗಿ ಅಧ್ಯಯನ ಮಾಡಿ ಮಾತನಾಡಲಿ ಎಂದು ಉನ್ನತ ಶಿಕ್ಷಣ ಸಚಿವರು ಹೇಳಿದರು.
ಇದುವರೆಗಿನ ಶಿಕ್ಷಣ ಪದ್ಧತಿ ಹೇಗಿತ್ತೆಂದರೆ, ನಾವು ಹೇಳಿದ್ದನ್ನು ಮಕ್ಕಳು ಕಲಿಯುತ್ತಿದ್ದರು. ಈ ಸಾಂಪ್ರದಾಯಿಕ ಪದ್ಧತಿಗೆ ರಾಷ್ಟ್ರೀಯ ಶಿಕ್ಷಣ ನೀತಿ ತಿಲಾಂಜಲಿ ಇಡುತ್ತಿದೆ. ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಸಣಪೂರ್ಣ ಸ್ವಾತಂತ್ರ್ಯವಿದೆ. ಬಹು ಶಿಸ್ತೀಯ, ಬಹ ಆಯ್ಕೆಯ ವಿಷಯಾಧಾರಿತ ಕಲಿಕೆಯೇ ಈ ಶಿಕ್ಷಣ ನೀತಿಯ ಆತ್ಮ ಎಂದ ಅವರು, ಮಾತೃಭಾ಼ಷೆ ಕಲಿಕೆಗೂ ಇಲ್ಲಿ ಅಗ್ರ ಮಾನ್ಯತೆ ಕೊಡಲಾಗಿದೆ ಎಂದು ಹೇಳಿದರು.
ಸಂವಾದದಲ್ಲಿ ಕೇಂದ್ರ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಖಾತೆ ಸಚಿವ ರಾಜೀವ್ ಚಂದ್ರಶೇಖರ್ ಅವರು ಮಾತನಾಡಿದರು. ಜತೆಗೆ, ವಿವಿಧ ಕ್ಷೇತ್ರಗಳ ಗಣ್ಯರು, ತಂತ್ರಜ್ಞರು, ಶಿಕ್ಷಣ ತಜ್ಞರ ಜತೆ ಸಂವಾದ ನಡೆಸಿದರು.