ಇಂಡೋ ಇಂಟರ್ ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್: ಬೆಂಗಳೂರು ರೈನೋಸ್ ಶುಭಾರಂಭ
ಬುಧವಾರ, 15 ಮೇ 2019 (15:26 IST)
ಇಂಡೋ ಇಂಟರ್ ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್ (ಐಐಪಿಕೆಎಲ್)ಗೆ ಇಲ್ಲಿನ ಬಾಲೆವಾಡಿ ಶ್ರೀ ಶಿವಛತ್ರಪತಿ ಒಳಾಂಗಣ ಕ್ರೀಡಾಂಗಣದಲ್ಲಿ ಅದ್ಧೂರಿ ಆರಂಭ ಸಿಕ್ಕಿದ್ದು, ಎರಡನೆ ದಿನದ ಪಂದ್ಯದಲ್ಲಿ ಬೆಂಗಳೂರು ರೈನೋಸ್ ಪಾಂಡಿಚೇರಿ ಪ್ರೊಡಾಟರ್ಸ್ ತಂಡವನ್ನು 7 ಅಂಕಗಳಿಂದ ಮಣಿಸಿ ಶುಭಾರಂಭ ಮಾಡಿದೆ.
ಪುಣೆ, ಮೈಸೂರು ಮತ್ತು ಬೆಂಗಳೂರಿನಲ್ಲಿ ಜೂನ್ 4ರ ವರೆಗೆ ಪಂದ್ಯಗಳು ನಡೆಯಲಿದ್ದು, ಕರ್ನಾಟಕದ 13 ಆಟಗಾರರು ಟೂರ್ನಿಯಲ್ಲಿ ಆಡಲಿದ್ದಾರೆ.
ವಿಜೇತ ತಂಡ ಬೆಂಗಳೂರು ರೈನೋಸ್ 39 ಅಂಕಗಳನ್ನು ಗಳಿಸಿದರೆ, ಪಾಂಡಿಚೇರಿ ತಂಡ 32 ಅಂಕಗಳನ್ನು ಗಳಿಸಿತು. ಜಿದ್ದಾಜಿದ್ದಿನ ಪಂದ್ಯದ ಮೊದಲಾರ್ಧದಲ್ಲಿ ಬೆಂಗಳೂರು 20 ಅಂಕ ಮತ್ತು ಪಾಂಡಿಚೇರಿ 17 ಅಂಕಗಳನ್ನು ಗಳಿಸಿತ್ತು.
ಐಐಪಿಕೆಎಲ್ ಪ್ರಾಯೋಜಕ ಡಾ.ಪ್ರಸಾದ್ ಬಾಬು ಮಾತನಾಡಿ, ಎರಡೂ ತಂಡಗಳು ಉತ್ತಮವಾಗಿ ಆಡಿವೆ ಎಂದರು. ಮುಂದಿನ ಪಂದ್ಯಗಳಿಗೆ ಉಭಯ ತಂಡಗಳಿಗೆ ಶುಭ ಹಾರೈಸಿದರು.
ಪುಣೆ, ಮೈಸೂರು, ಬೆಂಗಳೂರಿನಲ್ಲಿ ಒಟ್ಟು 48 ಪಂದ್ಯಗಳು ನಡೆಯಲಿವೆ ಎಂದು ಐಐಪಿಕೆಎಲ್‌ನ ರವಿಕಿರಣ್ ಹೇಳಿದ್ದಾರೆ. ಸರಣಿಯ ಫೈನಲ್ ಜೂ.4ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ಅತ್ಯಂತ ವೈಭವದಿಂದ ನಡೆದ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ನ ಉದಯೋನ್ಮುಖ ನಟಿ ಕೈನಾತ್ ಅರೋರಾ ನೃತ್ಯ, ಉತ್ತರ ಭಾರತದ ಸ್ಟಾರ್ ಹಾಡುಗಾರ ಎಂಡಿಕೆಡಿಯ ಮೈ ನವಿರೇಳಿಸುವ ನೃತ್ಯ, ದೇಶಭಕ್ತಿಯ ಗಾಯಕಿ ಕವಿ ಸಿಂಗ್ ಉದ್ಘಾಟನಾ ಸಮಾರಂಭದಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಈ ವೇಳೆ ಎಂಟು ತಂಡದ ಮಾಲೀಕರು ಹಾಜರಿದ್ದರು.
ಬೆಂಗಳೂರು ರೈನೋಸ್, ಚೆನ್ನೈ ಚಾಲೆಂಜರ್ಸ್, ದಿಲ್ಲರ್ ಡೆಲ್ಲಿ, ತೆಲುಗು ಬುಲ್ಸ್, ಛಿ ರಾಜೆ, ಪುಣೆ ಪ್ರೈಡ್, ಹರಿಯಾಣ ಹಿರೋಸ್, ಪಾಂಡ್ಯ ಪ್ರೆಡಿಕ್ಟರ್ಸ್ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ.