ರಾಜ್ಯದಲ್ಲಿ ಅಪಾರವಾಗಿ ನೆರೆ ಹಾನಿಯಾಗಿರೋದಕ್ಕೆ ಈ ಬಾರಿ ಕನ್ನಡ ರಾಜ್ಯೋತ್ಸವದ ಮೇಲೂ ಪ್ರಭಾವ ಬೀರಿದೆ.
ಸಂತ್ರಸ್ತರ ಸಂಕಷ್ಟಕ್ಕೆ ಮಿಡಿದ ಕನ್ನಡಪರ ಸಂಘಟನೆಗಳ ಸದಸ್ಯರು, ರಾಜ್ಯೋತ್ಸವ ಸರಳ ಆಚರಣೆಗೆ ನಿರ್ಧಾರ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ರಾಜ್ಯೋತ್ಸವ ಆಚರಣೆಗೆ ಯಾವುದೇ ನಿರ್ಬಂಧವಿಲ್ಲ. ಆದರೆ ಪ್ರವಾಹದಿಂದ ಆಗಿರುವ ಜೀವಹಾನಿಯನ್ನು ಗಮನದಲ್ಲಿರಿಸಿಕೊಂಡು, ಸ್ವಯಂ ಪ್ರೇರಣೆಯಿಂದ ಸರಳ ರೀತಿಯಿಂದ ರಾಜ್ಯೋತ್ಸವ ಆಚರಿಸೋಣ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಹೇಳಿದ್ರು.
ಜಿಲ್ಲೆಯಲ್ಲಿ ಪ್ರವಾಹದಿಂದ 32 ಜನರ ಜೀವ ಹಾನಿಯಾಗಿದ್ದು, ಸಾವಿರಾರು ಕೋಟಿ ರೂಪಾಯಿ ಹಾನಿಯಾಗಿದೆ. ಇಂತಹ ಪರಿಸ್ಥಿತಿಯನ್ನು ಅರಿತು ನಾವು ಸ್ವಯಂ ಪ್ರೇರಣೆಯಿಂದ ಕೆಲವು ನಿರ್ಬಂಧ ವಿಧಿಸಿಕೊಂಡು ಇನ್ನಷ್ಟು ಅರ್ಥಪೂರ್ಣವಾಗಿ ಆಚರಿಸೋಣ ಎಂದಿದ್ದಾರೆ.
ಈ ಬಾರಿ ರಾಜ್ಯೋತ್ಸವ ಸಂದರ್ಭದಲ್ಲಿ ಹೋಳಿಗೆ ಊಟ ಬೇಡ. ಡಾಲ್ಬಿಗೆ ಕಡಿವಾಣ ಹಾಕಿ, ಜನಪದ ಕಲಾತಂಡಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಂಡು ಎಲ್ಲ ಕನ್ನಡಪರ ಸಂಘಟನೆಗಳ ಆಶಯದಂತೆ ಸರಳ ಹಾಗೂ ಅರ್ಥಪೂರ್ಣವಾಗಿ ರಾಜ್ಯೋತ್ಸವ ಆಚರಿಸೋಣ ಎಂದರು. ಇದಕ್ಕೆ ಕನ್ನಡ ಪರ ಸಂಘಟನೆಗಳು ಸಾಥ್ ನೀಡಿವೆ.