ಕರಾವಳಿಯಲ್ಲಿ ಕೋಮುಗಲಭೆ ನಿಗ್ರಹಕ್ಕೆ ಹೊಸ ಮದ್ದು: ಆ್ಯಂಟಿ ಕಮ್ಯುನಲ್ ಟಾಸ್ಕ್ ಫೋರ್ಸ್ ರಚನೆ

Sampriya

ಶನಿವಾರ, 3 ಮೇ 2025 (14:08 IST)
ಮಂಗಳೂರು: ಕರಾವಳಿ ಜಿಲ್ಲೆಯಲ್ಲಿ ಕೋಮುಗಲಭೆ ನಿಗ್ರಹಕ್ಕೆ  ರಾಜ್ಯ ಸರ್ಕಾರ ಹೊಸ ದಾರಿಯನ್ನು ಕಂಡುಕೊಂಡಿದೆ. ಕೋಮುಗಲಭೆ ನಿಗ್ರಹಕ್ಕೆ ಆ್ಯಂಟಿ ಕಮ್ಯುನಲ್ ಟಾಸ್ಕ್ ಫೋರ್ಸ್ ರಚನೆ ಮಾಡುತ್ತೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಘೋಷಣೆ ಮಾಡಿದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮಾತ್ರ ಈ ಕೋಮುವಾದ ನಿಗ್ರಹ ಪಡೆ ಕೆಲಸ ಮಾಡುತ್ತದೆ. ಐಜಿಪಿ ನೇತೃತ್ವದಲ್ಲಿ ಕೆಲಸ ಮಾಡ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಆರೋಪಿಗಳನ್ನು ಬಂಧಿಸಲಾಗಿದೆ. ಸುಹಾಸ್ ಹಾಗೂ ಅಶ್ರಫ್ ಕೊಲೆಯಿಂದ ಜಿಲ್ಲೆಯ ಕೋಮುಸೌಹಾರ್ದಕ್ಕೆ ಧಕ್ಕೆಯಾಗಿದೆ. ಸುಹಾಸ್ ಕೊಲೆಯಲ್ಲಿ 8 ಜನ, ಅಶ್ರಫ್ ಕೊಲೆಯಲ್ಲಿ 21 ಜನ ಆರೋಪಿಗಳನ್ನು ಬಂಧಿಸಿದ್ದೇವೆ. ಯಾರನ್ನೂ ಕಾನೂನು ಉಲ್ಲಂಘನೆ ಮಾಡಲು ಬಿಡೋದಿಲ್ಲ ಎಂದು ಮಂಗಳೂರಿನಲ್ಲಿ ಹೇಳಿದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಸುಮಾರು ವರ್ಷದಿಂದ ಕೋಮುವಾದ ಹಿನ್ನೆಲೆಯಲ್ಲಿ ರಾಷ್ಟ್ರದ ಗಮನ ಸೆಳೆದಿದೆ. ಈ ಬಾರಿಯೂ ಈ ಘಟನೆ ಆದ್ಮೇಲೆ ದ.ಕ., ಉಡುಪಿಯಲ್ಲಿ ಮತ್ತೆ ಮರುಕಳಿಸಿದೆ ಅನ್ನೋ ಅಭಿಪ್ರಾಯ ಮೂಡಿದೆ. ಈ ಘಟನೆಯನ್ನು ಜನಸಮುದಾಯ ಇಷ್ಟ ಪಡೋದಿಲ್ಲ. ಅವರನ್ನ ಹತ್ತಿಕ್ಕಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆ ಶಾಂತಿಯಿಂದ ಇರಬೇಕು. ಇಂತಹ ಘಟನೆಗಳು ಮರುಕಳಿಸಬಾರದೆಂದು ನಾವು ಹೊಸದಾಗಿ ಒಂದು ಆ್ಯಂಟಿ ಕಮ್ಯುನಲ್ ಫೋರ್ಸ್‌ ಪ್ರತ್ಯೇಕವಾಗಿ ಮಾಡ್ತೇವೆ. ಆ್ಯಂಟಿ ನಕ್ಸಲ್ ಫೋರ್ಸ್‌ನಂತೆ ಪ್ರತ್ಯೇಕವಾಗಿ ಈ ಕೋಮುವಾದ ನಿಗ್ರಹ ಪಡೆ ಕೆಲಸ ಮಾಡುತ್ತೆ ಎಂದು ಮಾಹಿತಿ ನೀಡಿದರು.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ