ಬೆಂಗಳೂರು: ಇಂದು ತಡರಾತ್ರಿ ಹೊಸ ವರ್ಷದ ಪಾರ್ಟಿ ಮಾಡಲು ಉದ್ದೇಶಿಸಿರುವವರಿಗೆ ನಮ್ಮ ಮೆಟ್ರೋ ಹಾಗೂ ಬಿಎಂಟಿಸಿ ಗುಡ್ ನ್ಯೂಸ್ ನೀಡಿದೆ. ಪಾರ್ಟಿ ಮಾಡುವವರ ಅನುಕೂಲಕ್ಕಾಗಿ ಹೆಚ್ಚುವರಿ ಸೇವೆ ಸಲ್ಲಿಸಲು ಸಿದ್ಧವಾಗಿದೆ.
ಇಂದು ತಡರಾತ್ರಿ ಐಟಿ-ಬಿಟಿ ಸಿಟಿ ಜನ ಬ್ರಿಗೇಡ್ ರೋಡ್, ಎಂಜಿ ರೋಡ್ ಮುಂತಾದೆಡೆ ಸೇರಿಕೊಂಡು ತಮ್ಮ ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ. ಆದರೆ ತಡರಾತ್ರಿ ಮನೆಗೆ ಮರಳುವುದು ಹೇಗೆ ಎಂಬ ಚಿಂತೆಗೆ ಬಿಎಂಟಿಸಿ, ಮೆಟ್ರೋ ಗುಡ್ ನ್ಯೂಸ್ ನೀಡಿದೆ.
ಹೊಸ ವರ್ಷಾಚರಣೆ ಅಂಗವಾಗಿ ಇಂದು ಬಿಎಂಟಿಸಿ ಬಸ್ ನಗರದಾದ್ಯಂತ ತಡರಾತ್ರಿ 2 ಗಂಟೆಯವರೆಗೂ ಸಂಚಾರ ನಡೆಸಲಿದೆ. ಪಾರ್ಟಿ ನಡೆಯುವಂತಹ ಪ್ರಮುಖ ಸ್ಥಳಗಳಾದ ಎಂಜಿ ರೋಡ್, ಚರ್ಚ್ ಸ್ಟ್ರೀಟ್ ರೋಡ್ ಮುಂತಾದೆಡೆಗೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಎಂಜಿ ರೋಡ್ ನಿಂದ ವಿವಿಧ ಭಾಗಗಳಿಗೆ ಹೆಚ್ಚುವರಿಯಾಗಿ ರಾತ್ರಿ 11 ರಿಂದ 2 ರವರೆಗೆ ವಿಶೇಷ ಬಸ್ ಸಂಚಾರ ನಡೆಸಲಿದೆ.
13 ಸ್ಥಳಗಳಿಗೆ ವಿಶೇಷ ಬಸ್
ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಜಿಗಣಿ, ಕೆಂಗೇರಿ, ಸರ್ಜಾಪುರ, ಯಲಹಂಕ, ಜನಪ್ರಿಯ ಟೌನ್ ಶಿಪ್, ನೆಲಮಂಗಲ, ಬಾಗಲೂರು, ಹೊಸಕೋಟೆ, ಚನ್ನಚಂದ್ರ, ಕಾಡಗೋಡಿ, ಬನಶಂಕರಿಗೆ ವಿಶೇಷ ಬಸ್ ತಡರಾತ್ರಿ ಸಂಚಾರ ಮಾಡಲಿದೆ.
ಇದಲ್ಲದೆ ಕೆಂಪೇಗೌಡ ಬಸ್ ನಿಲ್ದಾಣದಿಂದ, ಕೆಆರ್ ಮಾರುಕಟ್ಟೆ, ಶಿವಾಜಿನಗರ, ಕೋರಮಂಗಲ, ಹೆಬ್ಬಾಳ, ಶಾಂತಿನಗರ, ಸಿಲ್ಕ್ ಬೋರ್ಡ್ ಮುಂತಾದ ಪ್ರಮುಖ ತಾಣಗಳಿಂದಲೂ ಹೆಚ್ಚುವರಿ ಬಸ್ ವ್ಯವಸ್ಥೆಯಿರಲಿದೆ.
ಮೆಟ್ರೋದಿಂದಲೂ ಹೆಚ್ಚುವರಿ ಸೇವೆ
ಹೊಸ ವರ್ಷದ ಆಚರಣೆ ಮಾಡುವವರಿಗಾಗಿ ನಮ್ಮ ಮೆಟ್ರೋ ಕೂಡಾ ಇಂದು ಹೆಚ್ಚುವರಿ ಅವಧಿಯವರೆಗೆ ಸೇವೆ ನೀಡಲಿದೆ. ಇಂದು ತಡರಾತ್ರಿ 2 ರವರೆಗೆ ಮೆಟ್ರೋ ಸೇವೆಯಿರಲಿದೆ. ಆದರೆ ಕುಡಿದು ಬಂದು ಮಹಿಳೆಯರ ಜೊತೆ ಕಿರಿಕ್ ಮಾಡಿದರೆ 500 ರೂ. ದಂಡದ ಬರೆ ಸಿಗಲಿದೆ. ಅಲ್ಲದೆ ಅಂತಹವರನ್ನು ಪೊಲೀಸರು ವಶಕ್ಕೆ ಪಡೆಯಲೂ ವ್ಯವಸ್ಥೆ ಮಾಡಲಾಗಿದೆ.