ನ್ಯೂ ಇಯರ್ ಎಲ್ಲಾದ್ರೂ ಮಾಡ್ಲಿ, ಕೊರೊನಾ ನಿಯಮ ಪಾಲಿಸಲಿ: ಬೊಮ್ಮಾಯಿ
ಸೋಮವಾರ, 27 ಡಿಸೆಂಬರ್ 2021 (20:58 IST)
ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆ ಎಲ್ಲಾದರೂ ಮಾಡಲಿ. ಆದರೆ ಕೋವಿಡ್-19 ನಿಯಮ ಪಾಲಿಸಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಹೊಸ ವರ್ಷಕ್ಕೆ ಇನ್ನೇನು ಕೌಂಟ್‌ಡೌನ್ ಸ್ಟಾರ್ಟ್ ಆಗಿದೆ. ಈ ನಡುವೆ ಜನ ಹೊಸ ವರ್ಷಾಚರಣೆಗೆ ಗುಂಪುಗೂಡಿ ಮತ್ತೆ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ಸರ್ಕಾರ ಡಿಸೆಂಬರ್ 28 ರಿಂದ ನೈಟ್ ಕರ್ಫ್ಯೂ ಘೋಷಿಸಿದೆ.
ಕೊರೊನಾ ಎರಡನೇ ಅಲೆಯಿಂದ ಈಗಷ್ಟೇ ಸುಧಾರಿಸಿಕೊಳ್ಳುತ್ತಿರುವ ರಾಜ್ಯದ ಜನತೆಗೆ ಇದೀಗ ಮತ್ತೊಮ್ಮೆ ನೈಟ್ ಕರ್ಫ್ಯೂ ವಿಧಿಸಿರುವುದು ಭಾರೀ ಆತಂಕ ಸೃಷ್ಟಿಸಿದೆ. ಹಲವಾರು ಮಂದಿ ಈ ನೈಟ್ ಕರ್ಫ್ಯೂಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಸದ್ಯ ಈ ಕುರಿತಂತೆ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, ನಮಗೂ ಆರ್ಥಿಕ ಚಟುವಟಿಕೆಗಳು ನಡೆಯಲಿ ಎಂಬ ಯೋಚನೆ ಇದೆ. ಕೋವಿಡ್ ಕಾರಣದಿಂದಾಗಿ ಆರೋಗ್ಯ ದೃಷ್ಟಿಯಿಂದ ನೈಟ್ ಕರ್ಫ್ಯೂ ಜಾರಿಗೊಳಿಸಿದ್ದೇವೆ ಎಂದು ಹೇಳಿದ್ದಾರೆ.
ಹೊಸ ವರ್ಷದ ಸಂಭ್ರಮಾಚರಣೆಗೆ ಜನರು ಪ್ರವಾಸಿ ತಾಣ, ರೆಸಾರ್ಟ್‍ಗಳಿಗೆ ಮುಗಿಬೀಳುತ್ತಿರುವ ಬಗ್ಗೆ ಮಾತನಾಡಿದ ಅವರು, ಸಂಭ್ರಮಾಚರಣೆಗೆ ಎಲ್ಲಾದರೂ ಮಾಡಲಿ. ಆದರೆ ಕೋವಿಡ್ ನಿಯಮಗಳನ್ನು ಅನುಸರಿಸಲಿ. ಅವರಿಗೆ ಎಲ್ಲಿಗೆ ಬೇಕಾದರೂ ಹೋಗಲು ಸ್ವಾತಂತ್ರ್ಯ ಇದೆ. ನಿಯಮ ಪಾಲಿಸಿ ಸಂಭ್ರಮಾಚರಿಸಿಲಿ ಎಂದು ತಿಳಿಸಿದ್ದಾರೆ.
ಇದೇ ವೇಳೆ ಕೋವಿಡ್ ಮೃತರ ಕುಟುಂಬಗಳಿಗೆ ಪರಿಹಾರ ನೀಡುವುದರ ಬಗ್ಗೆ ಮಾತನಾಡಿದ ಅವರು, ಯೋಜನೆ ಜಾರಿ ವಿಳಂಬ ಆಗಿಲ್ಲ. ಕೋವಿಡ್ ಮೃತರ ಕುರಿತು ದಾಖಲೆಗಳ ಸಂಗ್ರಹ ನಡೆಯುತ್ತಿದೆ. ಎರಡು ತಿಂಗಳು ನೀತಿ ಸಂಹಿತೆ ಇತ್ತು. ಈಗಾಗಲೇ ಎಲ್ಲ ಕಡೆ ಪರಿಹಾರ ಕೊಡಲಾಗುತ್ತಿದೆ ಎಂದಿದ್ದಾರೆ.
ಪಕ್ಷದಲ್ಲಿ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪಕ್ಷದಕಲ್ಲಿ ಬದಲಾವಣೆ ಆಗುತ್ತದೆ ಎಂಬುವುದು ಮಾಧ್ಯಮ ಸೃಷ್ಟಿ ಅಷ್ಟೇ. ಪಕ್ಷ ಮತ್ತು ಸರ್ಕಾರದ ಮಧ್ಯೆ ಸಮನ್ವಯತೆ ಇದೆ. ಮುಂದಿನ ಸಾರ್ವತ್ರಿಕ ಚುನಾವಣೆಯನ್ನು ಸಾಮೂಹಿಕವಾಗಿ ಎದುರಿಸುತ್ತೇವೆ ಎಂದಿದ್ದಾರೆ.