ಚನ್ನಪಟ್ಟಣ: ಚುನಾವಣಾ ಪ್ರಚಾರದ ವೇಳೆ ಕಣ್ಣೀರು ಹಾಕಿ ಮತಯಾಚನೆ ಮಾಡುವ ತಮ್ಮ ತಾತ ದೇವೇಗೌಡ ಮತ್ತು ತಂದೆ ಕುಮಾರಸ್ವಾಮಿಯವರ ಪರಂಪರೆಯನ್ನು ನಿಖಿಲ್ ಕುಮಾರಸ್ವಾಮಿ ಕೂಡಾ ಮುಂದುವರಿಸಿದ್ದಾರೆ.
ಚನ್ನಪಟ್ಟಣ ಉಪಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿಯವರು ಸ್ಪರ್ಧೆ ಮಾಡುತ್ತಿದ್ದಾರೆ. ಎಚ್ ಡಿ ಕುಮಾರಸ್ವಾಮಿಯವರಿಂದ ತೆರವಾದ ಸ್ಥಾನಕ್ಕೆ ಪುತ್ರ ನಿಖಿಲ್ ಕಣಕ್ಕಿಳಿದಿದ್ದಾರೆ. ಇತ್ತ ಕಾಂಗ್ರೆಸ್ ನಿಂದ ಸಿಪಿ ಯೋಗೇಶ್ವರ್ ಸ್ಪರ್ಧಿಸುತ್ತಿದ್ದಾರೆ.
ಇದೀಗ ಚನ್ನಪಟ್ಟಣ ಉಪಚುನಾವಣೆ ಪ್ರಚಾರ ಕಾರ್ಯ ರಂಗೇರಿದ್ದು, ನಿಖಿಲ್ ಕುಮಾರಸ್ವಾಮಿ ಮತಯಾಚನೆ ಮಾಡಿದ್ದಾರೆ. ಈ ವೇಳೆ ಅವರು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಸಾಮಾನ್ಯವಾಗಿ ದೇವೇಗೌಡರು ಮತ್ತು ಕುಮಾರಸ್ವಾಮಿ ಜನರ ಜೊತೆ ಮಾತನಾಡುವಾಗ ಭಾವುಕರಾಗಿ ಕಣ್ಣೀರು ಹಾಕಿದ ಅನೇಕ ನಿದರ್ಶನಗಳಿವೆ. ಇದೀಗ ನಿಖಿಲ್ ಕೂಡಾ ಆ ಪರಂಪರೆ ಮುಂದುವರಿಸಿದ್ದಾರೆ.
ನಾನು ಈ ಮೊದಲು ಎರಡು ಬಾರಿ ಚುನಾವಣೆಗೆ ಸ್ಪರ್ಧಿಸಿದ್ದೆ. ನಾನು ಏನು ತಪ್ಪು ಮಾಡಿದ್ದೇನೆ ಎಂದು ಗೊತ್ತಿಲ್ಲ. ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗನಾಗಿ ಮತ್ತು ಎರಡು ಬಾರಿ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿಯವರ ಮಗನಾಗಿ ಹುಟ್ಟಿದ್ದೇ ತಪ್ಪಾ ಎನ್ನುತ್ತಾ ನಿಖಿಲ್ ಕಣ್ಣೀರು ಹಾಕಿದರು.