ಬೆಂಗಳೂರು: ರಾಜ್ಯದ ನೂತನ ಹಾಗೂ ಮೊದಲ ಮಹಿಳಾ ಪೊಲೀಸ್ ಮಹಾನಿರ್ದೇಶಕರಾಗಿ ನೀಲಮಣಿ ಎನ್.ರಾಜು ನೇಮಕವಾಗಿದ್ದಾರೆ.
ಡಿಜಿಪಿಯಾಗಿ ನೀಲಮಣಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಮೊದಲ ಮಹಿಳಾ ಡಿಜಿಪಿಯಾಗಿ ನೀಲಮಣಿ ಎನ್.ರಾಜು ನೇಮಕಗೊಂಡಿದ್ಧಾರೆ. ಹಾಲಿ ಡಿಜಿಪಿ ಆರ್.ಕೆ.ದತ್ತ ಅಧಿಕಾರಾವಧಿ ಇಂದು(ಅ.31) ಮುಕ್ತಾಯವಾಗಲಿದೆ. ಹೀಗಾಗಿ ಈ ಸ್ಥಾನಕ್ಕೆ 1983 ಬ್ಯಾಚ್ ಐಪಿಎಸ್ ಅಧಿಕಾರಿಯಾಗಿರುವ ನೀಲಮಣಿ ಎನ್.ರಾಜು ಇಂದು ಸಂಜೆ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಹಿರಿಯ ಐಪಿಎಸ್ ಅಧಿಕಾರಿಗಳಾದ ಎಂ.ಎನ್.ರೆಡ್ಡಿ, ಕಿಶೋರ್ ಚಂದ್ರ ಮತ್ತು ನೀಲಮಣಿ ರಾಜು ನಡುವೆ ಡಿಜಿಪಿ ಸ್ಥಾನಕ್ಕಾಗಿ ತೀವ್ರ ಪೈಪೋಟಿಯಿತ್ತು. ಆದರೆ ಅಂತಿಮವಾಗಿ ಹಿರಿತನ ಮತ್ತು ಸೇವಾ ಜೇಷ್ಠತೆಯ ಆಧಾರದ ಮೇಲೆ ನೀಲಮಣಿ ರಾಜುರನ್ನು ಸರ್ಕಾರ ಆಯ್ಕೆ ಮಾಡಿದೆ.
25 ವರ್ಷ ಕೇಂದ್ರ ಸೇವೆಯಲ್ಲಿದ್ದ ನೀಲಮಣಿ ರಾಜು, ಇತ್ತೀಚೆಗೆ ರಾಜ್ಯಕ್ಕೆ ಮರಳಿದ್ದರು. ಇವರು ಆಂತರಿಕ ವಿಭಾಗದ ಭದ್ರತೆಯ ಡಿಜಿಪಿ, ರಾಜ್ಯ ಗೃಹರಕ್ಷಕ, ಅಗ್ನಿಶಾಮಕ ದಳದ ಡಿಜಿಪಿಯಾಗಿ ಸೇವೆ ಸಲ್ಲಿಸಿದ್ದಾರೆ.