ಕೋಲಾರ ಜಿಲ್ಲಾದ್ಯಂತ ಆಜಾದಿ ಕಾ ಅಮೃತ ಸರೋವರ ಯೋಜನೆಯಡಿ ಕೆರೆಗಳ ಅಭಿವೃದ್ದಿಗಾಗಿ, ಸುಮಾರು 75 ಕೆರೆಗಳನ್ನ ಆಯ್ಕೆ ಮಾಡಿಕೊಂಡು ಕಾಮಗಾರಿ ಪ್ರಾರಂಭಿಸಲಾಗಿತ್ತು. ಈ ಹಿನ್ನೆಲೆ ಇಂದು ಸಚಿವೆ ನಿರ್ಮಲಾ ಸೀತಾರಾಮನ್ ಕೆರೆ ಕಾಮಗಾರಿ ವೀಕ್ಷಣೆಗೆ ಕೋಲಾರಕ್ಕೆ ಆಗಮಿಸಿದ್ದರು.
ಕೆರೆ ಕಾಮಗಾರಿ ವೀಕ್ಷಿಸಿದ ನಿರ್ಮಲಾ ಸೀತಾರಾಮನ್
ಕೆರೆಯನ್ನ ವೀಕ್ಷಿಸಿದ ನಿರ್ಮಾಲಾ ಸೀತಾರಾಮನ್ ಅಧಿಕಾರಿಗಳ ವಿರುದ್ದ ಕಿಡಿಕಾರಿದರು. ಕೆರೆಗೆ ನೀರು ಸುಗಮವಾಗಿ ಹರಿದು ಬರಬೇಕು. ನೀರು ಹರಿದು ಬರದಿದ್ದರೆ ಕೆರೆ ಹೇಗೆ ತುಂಬುತ್ತದೆ?. ಮುಂದಿನ ಕೆರೆಗಳಿಗೆ ಯಾವ ರೀತಿ ನೀರು ಹರಿದು ಹೋಗಲು ಸಾಧ್ಯ? ಎಂದು ಪ್ರಶ್ನಿಸಿದರು. ಕೆರೆಗಳ ಅಭಿವೃದ್ದಿಗೆ ಮತ್ತಷ್ಟು ಹಣ ನೀಡುತ್ತೇವೆ. ಆದರೆ, ಕಾಮಗಾರಿಯನ್ನು ಸಮರ್ಪಕವಾಗಿ ಮಾಡಬೇಕು ಎಂದು ಜಿ.ಪಂ ಸಿಇಒ ಮತ್ತು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಕೆರೆ ಕಾಮಗಾರಿಗೆ ಸಚಿವರ ಅನುದಾನದಿಂದ 1.83 ಕೋಟಿ ರೂ.ಬಿಡುಗಡೆ ಮಾಡಲಾಗಿದೆ. ಕೋಲಾರದ 75 ಕೆರೆಗಳ ಕಾಮಗಾರಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅದರಂತೆ ಇಂದು ಬಂಗಾರಪೇಟೆ ತಾಲೂಕಿನ ಚಿಕ್ಕ ಅಂಕಡಹಳ್ಳಿ ಕೆರೆಯ ಅಭಿವೃದ್ದಿ ಕಾಮಗಾರಿ ವೀಕ್ಷಣೆ ಮಾಡಿದ್ದು, ನಂತರ ಕೆಜಿಎಫ್‌ನ ಪೆದ್ದಪಲ್ಲಿ ಮತ್ತು ಕೋಲಾರ ತಾಲ್ಲೂಕಿನ ಶೆಟ್ಟಿಕೊತ್ತನೂರು ಗ್ರಾಮದ ಕೆರೆಗಳ ವೀಕ್ಷಣೆ ನಡೆಯಲಿದೆ. ಸಚಿವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ, ಸಂಸದ ಎಸ್.ಮುನಿಸ್ವಾಮಿ ಮತ್ತು ಮಾಜಿ ಶಾಸಕರು ಸಾಥ್ ನೀಡಿದರು.